ಮಂಗಳೂರು: ಕಾವೂರು ಫ್ರೆಂಡ್ಸ್ (ರಿ.) ಕಾವೂರು ಆಶ್ರಯದಲ್ಲಿ ಹಾಗೂ ತುಡರ್ ಮಹಿಳಾ ತಂಡ ಕಾವೂರು ಸಹಭಾಗಿತ್ವದಲ್ಲಿ ‘ಆಟಿದ ಐತಾರ’ ಕಾರ್ಯಕ್ರಮವು ಆ.16ರಂದು ಕಾವೂರಿನ ಶ್ರೀ ಗುರು ವೈದ್ಯನಾಥ ಸಭಾಭವನದಲ್ಲಿ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ವಿದ್ವಾಂಸರಾದ ಕೆ.ಕೆ. ಪೇಜಾವರ ವಹಿಸಿದ್ದರು. ಅಗರಿ ಎಂಟರ್‌ಪ್ರೈಸಸ್‌ನ ಮಾಲಕರಾದ ರಾಘವೇಂದ್ರ ಅಗರಿ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತುಳುನಾಡಿನ ಸಂಪ್ರದಾಯದಂತೆ ಕಲ್ಪವೃಕ್ಷದ ಹೂ ಬಿಡಿಸುವ ಮೂಲಕ ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷರಾದ ಶ್ರೀ ಲೋಕೇಶ್ ಭಂಡಾರಿ ಅವರು ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು.

ಆ.9ರಂದು ನಡೆದ ಕ್ರೀಡಾಕೂಟದ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಸಂಚಯಗಿರಿ ಬಂಟ್ವಾಳದ ಅಧ್ಯಕ್ಷರಾದ ತುಕಾರಾಮ್ ಪೂಜಾರಿ ಅವರು ‘ಆಟಿದ ಪಾತರ’ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ, ಕರ್ನಾಟಕ ರಾಜ್ಯ ಆಹಾರ ಆರೋಗ್ಯ ಆಯೋಗದ ಸದಸ್ಯ ಶ್ರೀ ಸುಮಂತ್ ರಾವ್, ಬಿಜೆಪಿ ಮುಖಂಡರಾದ ರಂದೀಪ್ ಕಾಂಚನ್, ಸೀತೇಶ್ ಕೊಂಡೆ, ಅಜಿತ್ ಶೆಟ್ಟಿ, ಸಂದೀಪ್ ಬೊಂದೇಲ್, ಗುರಿಕಾರರಾದ ಶ್ರೀ ಕುಸುಮಾಕರ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸ್ಥಳೀಯರಾದ ಚಂದು ಮಾಸ್ಟರ್, ಬಾಲಚಂದ್ರ, ಚೆನ್ನಪ್ಪ ಕಾವೂರು, ತುಡರ್ ಮಹಿಳಾ ತಂಡದ ಅಧ್ಯಕ್ಷೆ ಗಿರಿಜಾ ಬಾಲಕೃಷ್ಣ, ಕಾವೂರು ಫ್ರೆಂಡ್ಸ್‌ನ ಉಪಾಧ್ಯಕ್ಷ ಶಂಕರ್ ಕಾವೂರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಸನ್ಮಾನಿಸಲಾಯಿತು. ನಿವೃತ್ತ ದೈಹಿಕ ಶಿಕ್ಷಕ ಬಾಲಕೃಷ್ಣ ಮಾಸ್ಟರ್, ವಿಶ್ವ ಹಿಂದೂ ಪರಿಷತ್–ಬಜರಂಗದಳ ಕಾವೂರು ಪ್ರಖಂಡದ ಪ್ರಮುಖರು ಹಾಗೂ ಆಂಬುಲೆನ್ಸ್ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಿಜಯ್ ಆಕಾಶಭವನ, ಸಮಾಜ ಸೇವೆಗಾಗಿ ಚಕ್ರವರ್ತಿ ಶಿವಾಜಿ ಸೇವಾ ಬಳಗ (ರಿ.) ಕರ್ನಾಟಕದ ಸ್ಥಾಪಕ ಅಧ್ಯಕ್ಷ ಹರೀಶ್ ಅಮ್ಟಾಡಿ ಹಾಗೂ ಜೀ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್ ಫೈನಲಿಸ್ಟ್ ಆಶ್ಮಿತ್ ಎಜೆ ಮಂಗಳೂರು ಅವರನ್ನು ಗೌರವಿಸಲಾಯಿತು. ಕಾವೂರು ವಲಯದ ಪೌರಕಾರ್ಮಿಕರನ್ನೂ ಸನ್ಮಾನಿಸಲಾಯಿತು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಹಿಳೆಯರು ಸಿದ್ಧಪಡಿಸಿದ ವಿವಿಧ ಆಟಿ ತಿಂಡಿ-ತಿನಿಸುಗಳ ಮೇಳ ಗಮನ ಸೆಳೆಯಿತು. ತುಳುನಾಡಿನ ಸಾಂಪ್ರದಾಯಿಕ ಆಹಾರ ಪದ್ಧತಿಯ ವೈವಿಧ್ಯತೆಯನ್ನು ಪರಿಚಯಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಳಿಕ ಖ್ಯಾತ ಗಾಯಕ ಸಂದೇಶ್ ನೀರುಮಾರ್ಗ ಅವರಿಂದ ನಡೆದ ಸಂಗೀತ ರಸಮಂಜರಿ ಪ್ರೇಕ್ಷಕರನ್ನು ರಂಜಿಸಿತು.
ಕಾವೂರು ಫ್ರೆಂಡ್ಸ್ (ರಿ.) ಕಾವೂರಿನ ಅಧ್ಯಕ್ಷ ಶ್ರೀ ಲೋಹಿತ್ ಅಮೀನ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ನವೀನ್ ಬಲ್ಲಾಲ್‌ಬಾಗ್ ವಂದನಾರ್ಪಣೆ ಸಲ್ಲಿಸಿದರು. ಡಾ. ನಿವೇದಿತ ಹರೀಶ್ ಕಾರ್ಯಕ್ರಮ ನಿರೂಪಿಸಿದರು.
ತುಳುನಾಡಿನ ಸಂಸ್ಕೃತಿ, ಸಂಪ್ರದಾಯ, ಆಟಿ ತಿಂಡಿ ಹಾಗೂ ಸ್ಥಳೀಯ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮೂಲಕ ‘ಆಟಿದ ಐತಾರ’ ಕಾರ್ಯಕ್ರಮವು ಕಾವೂರಿನಲ್ಲಿ ಸಾಂಸ್ಕೃತಿಕ ಸಂಭ್ರಮಕ್ಕೆ ಸಾಕ್ಷಿಯಾಯಿತು.

