ಜೂ. 21 ಅಪ್ಪಂದಿರ ದಿನ

0
4

ಸೈಕಲ್ ಸವಾರಿ ಮತ್ತು ಪೋಲಿಯೋ ಡ್ರಾಪ್ಸ್

1980ರ ಕಾಲಘಟ್ಟ. ನಮ್ಮೂರು ಚೂಂತಾರು ಸಮೀಪದ, ಶೇಣಿಯ ಸರಕಾರಿ ಶಾಲೆಯಲ್ಲಿ ಓದುತ್ತಿದ್ದ ಸಮಯವದು. ಆ ಸಂದರ್ಭದಲ್ಲಿ ಪೊಲಿಯೋ ಡ್ರಾಪ್ಸ್ ಹಾಕುವುದು ಈಗಿನಂತೆ ಎಲ್ಲೆಡೆ ಭರದಿಂದ ನಡೆಯುತ್ತಿತ್ತು. ನಮ್ಮಪ್ಪನಿಗೆ ನಾನು ಸೇರಿ ನಾಲ್ಕು ಮಕ್ಕಳು ಬೆನ್ನು ಬೆನ್ನಿಗೆ ಹುಟ್ಟಿದ ಕಾರಣದಿಂದ ನಮಗೆಲ್ಲರಿಗೂ ವರ್ಷದಷ್ಟೆ ಅಂತರ ಇತ್ತು. ತಮ್ಮ, ಅಣ್ಣ, ಅಕ್ಕ ಮತ್ತು ನನಗೆ ಹೀಗೆ ನಾಲ್ವರಿಗೂ ಪೊಲಿಯೋ ಡ್ರಾಪ್ಸ್ ಹಾಕಿಸಬೇಕಿತ್ತು. ನಮ್ಮಪ್ಪ ವೃತ್ತಿಯಲ್ಲಿ ಪುರೋಹಿತರು.

ಮನೆಯಲ್ಲಿ ಕಡು ಬಡತನವಿದ್ದರೂ ಹೊಟ್ಟೆ ಮತ್ತು ಬಟ್ಟೆಗೆ ನಮ್ಮ ತಂದೆ ಎಂದೂ ಕಡಿಮೆ ಮಾಡಿದವರಲ್ಲ. ಪೊಲಿಯೋ ಡ್ರಾಪ್ಸ್ ಹಾಕುವ ದಿನ ನಮ್ಮಪ್ಪನಿಗೆ ಬೇರೆ ಧಾರ್ಮಿಕ ಕ್ರಿಯೆಗೆ ಹೋಗಬೇಕಿದ್ದ ಕಾರಣ ಬೆಳಿಗ್ಗೆಯೇ ನಮಗೆಲ್ಲರಿಗೂ ಪೊಲಿಯೋ ಡ್ರಾಪ್ಸ್ ಹಾಕಿಸಬೇಕು ಎಂದು ತಂದೆ ನಿಶ್ಚಯಿಸಿದ್ದರು. ನಮ್ಮ ತಂದೆಯ ಬಳಿಯಲ್ಲಿ ಇದ್ದಿದ್ದು ಒಂದು ಹಳೆಯ ಸೈಕಲ್, ನಾಲ್ಕು ಮಕ್ಕಳನ್ನು ಏಕಕಾಲಕ್ಕೆ ನಮ್ಮ ಮನೆಯಿಂದ 5 ಕಿ.ಮೀ. ದೂರದ ಕುಕ್ಕುಜಡ್ಕ ಎಂಬಲ್ಲಿಗೆ ಕರೆದೊಯ್ಯಬೇಕಾಗಿತ್ತು. ಹಾಗೆಂದು ಮಕ್ಕಳಿಗೆ ಹಾಕಬೇಕಾದ ಪೊಲಿಯೋ ಡ್ರಾಪ್ಸ್ ಹಾಕಲೇ ಬೇಕಾಗಿತ್ತು. ನಮ್ಮ ಅಪ್ಪಯ್ಯನ ‘ಪಿತೃಪ್ರಜ್ಞೆ’ ಜಾಗ್ರತವಾಗಿತ್ತು.

ಏನಾದರೂ ಮಾಡಿ ಡ್ರಾಪ್ಸ್ ಹಾಕಿಸಲೇ ಬೇಕೆನ್ನುವ ದೃಢ ನಿರ್ಧಾರಕ್ಕೆ ಅವರು ಬಂದಿದ್ದರು. ಸೈಕಲ್‍ನ ಮುಂಭಾಗದ ರಿಮ್‍ನ ಮೇಲೆ ದಿಂಬು ಇಟ್ಟು ನಾನು ಮತ್ತು ತಮ್ಮನನ್ನು ಕುಳ್ಳಿರಿಸಿದ್ದರು. ಹಿಂಭಾಗದಲ್ಲಿನ ಕ್ಯಾರಿಯರ್ ಜಾಗದಲ್ಲಿ ಅಕ್ಕ ಮತ್ತು ಅಣ್ಣನನ್ನು ಕೂರಿಸಿದ್ದರು. ಮಕ್ಕಳು ಬೀಳಬಾರದು ಎಂಬ ದೃಷ್ಟಿಯಿಂದ ತನ್ನ ಮಕ್ಕಳನ್ನು ತಮ್ಮ ಹೊಟ್ಟೆಯ ಭಾಗದ ಸುತ್ತ ಬೈರಾಸಿನಿಂದ ಕಟ್ಟಿಕೊಂಡು ಎಲ್ಲಿಯೂ ನಿಲ್ಲಿಸದೆ 5 ಕಿ.ಮೀ. ಪ್ರಯಾಣ ಮಾಡಿದ್ದರು. ಶ್ರಮಜೀವಿಯಾದ ಅಪ್ಪನ ಬೆವರಿನ ಹನಿಗಳು ನಮ್ಮ ಮೈಮೇಲೆ ಬಿದ್ದು ಅಂಗಿ ಒದ್ದೆಯಾದ ದಿನಗಳು ಇನ್ನು ಮಾಸಿಲ್ಲ. ಅಪ್ಪನ ಆ ಬೆವರಿನ ವಾಸನೆಯನ್ನು ನೆನೆದರೆ ಈಗಲೂ ನನಗೆ ರೋಮಾಂಚನವಾಗುತ್ತದೆ.

ಎಷ್ಟೇ ಕಷ್ಟವಿದ್ದರೂ ಯಾರೊಂದಿಗೂ ಹೇಳದೆ ತನ್ನ ಪಿತೃತ್ವದ ಜವಾಬ್ದಾರಿಯನ್ನು ನೆರವೇರಿಸಿದ ನನ್ನ ಅಪ್ಪನನ್ನು ನೆನೆದಾಗ ನನಗೆ ಈಗಲೂ ಹೆಮ್ಮೆ ಅನಿಸುತ್ತದೆ. ಈಗ 80ರ ಹರೆಯದ ನನ್ನ ಅಪ್ಪ ನನ್ನ ಐಷಾರಾಮಿ ಮರ್ಸಿಡಿಸ್ ಬೆನ್ಜ್ ಕಾರಿನ ಮುಂದಿನ ಸೀಟಿನಲ್ಲಿ ನಿರ್ಲಿಪ್ತ ಭಾವದಿಂದ ಕುಳಿತು ಸೀಟು ಬೆಲ್ಟ್ ಹಾಕಲು ಪರದಾಡುವಾಗ ನನ್ನ ಕಣ್ಣುಗಳೆರಡು ಒದ್ದೆಯಾಗಿರುವುದಂತೂ ನಿಜವಾದ ಮಾತು. ನನ್ನ ಮಗಳು ಅಜ್ಜನಿಗೆ ಸೀಟು ಬೆಲ್ಟ್ ಹಾಕಲು ಬರುವುದಿಲ್ಲ ಎಂದು ನಗುವಾಗ ನನ್ನ ಅಪ್ಪ ಹೇಳುತ್ತಿದ್ದ ”ಹಣ್ಣೆಲೆ ಬೀಳುವಾಗ ಚಿಗುರೆಲೆ ನಕ್ಕಿತಂತೆ” ಎಂಬ ಮಾತು ನೆನೆದು ನಾನು ಮೌನಿಯಾಗುತ್ತೇನೆ.

-ಡಾ|| ಮುರಲೀ ಮೋಹನ ಚೂಂತಾರು

LEAVE A REPLY

Please enter your comment!
Please enter your name here