ನವದೆಹಲಿ : ಡಿಜಿಟಲ್ ಪಾವತಿ ಕ್ಷೇತ್ರದ ಜನಪ್ರಿಯ ಆ್ಯಪ್ PhonePe ತನ್ನ ವಾಲೆಟ್ ಸೇವೆಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತಂದಿದ್ದು, ದೀರ್ಘಕಾಲ ವಾಲೆಟ್ ಬಳಸದ ಬಳಕೆದಾರರಿಗೆ ನಿರ್ವಹಣಾ ಶುಲ್ಕ (Maintenance Charge) ವಿಧಿಸಲು ಮುಂದಾಗಿದೆ.
ಫೋನ್‌ಪೇ ವಾಲೆಟ್ ಸಕ್ರಿಯಗೊಳಿಸಿದ ಬಳಕೆದಾರರು ಬ್ಯಾಂಕ್ ಖಾತೆ ಇಲ್ಲದಿದ್ದರೂ ಹಣಕಾಸು ವ್ಯವಹಾರಗಳನ್ನು ನಡೆಸಬಹುದಾಗಿದೆ. ಸಣ್ಣ ಮೊತ್ತದ ಪಾವತಿಗಳನ್ನು ವೇಗವಾಗಿ ಮಾಡಲು ಮತ್ತು ಯುಪಿಐ ಪಿನ್ ನಮೂದಿಸುವ ಅಗತ್ಯವಿಲ್ಲದ ಕಾರಣ ಅನೇಕರು ಈ ಸೇವೆಯನ್ನು ಬಳಸುತ್ತಿದ್ದಾರೆ. ಆದರೆ ಈಗ ವಾಲೆಟ್ ಬಳಸದೇ ಇಟ್ಟವರಿಗೆ ಹೆಚ್ಚುವರಿ ಶುಲ್ಕದ ಹೊರೆ ಬೀಳಲಿದೆ.
ಕಂಪನಿಯ ಹೊಸ ನಿಯಮದ ಪ್ರಕಾರ, ವಾಲೆಟ್‌ನಲ್ಲಿ 365 ದಿನಗಳ ಕಾಲ ಯಾವುದೇ ಹಣಕಾಸು ವಹಿವಾಟು ನಡೆಯದಿದ್ದರೆ ಅದನ್ನು ನಿಷ್ಕ್ರಿಯ (Inactive) ಎಂದು ಪರಿಗಣಿಸಲಾಗುತ್ತದೆ. ಇಂತಹ ನಿಷ್ಕ್ರಿಯ ವಾಲೆಟ್‌ಗಳ ಮೇಲೆ ಪ್ರತಿ ಮೂರು ತಿಂಗಳಿಗೊಮ್ಮೆ ₹100 (ಜಿಎಸ್‌ಟಿ ಸೇರಿ) ನಿರ್ವಹಣಾ ಶುಲ್ಕ ವಿಧಿಸಲಾಗುತ್ತದೆ.
ವಾಲೆಟ್‌ನಲ್ಲಿ ₹100 ಅಥವಾ ಅದಕ್ಕಿಂತ ಹೆಚ್ಚು ಮೊತ್ತ ಇದ್ದರೆ ನೇರವಾಗಿ ₹100 ಕಡಿತಗೊಳ್ಳುತ್ತದೆ. ಬ್ಯಾಲೆನ್ಸ್ ₹100ಕ್ಕಿಂತ ಕಡಿಮೆ ಇದ್ದರೆ ಲಭ್ಯವಿರುವ ಸಂಪೂರ್ಣ ಮೊತ್ತವನ್ನೇ ಶುಲ್ಕವಾಗಿ ಕಡಿತ ಮಾಡಿಕೊಳ್ಳಲಾಗುತ್ತದೆ.
ಈ ಶುಲ್ಕದಿಂದ ತಪ್ಪಿಸಿಕೊಳ್ಳಲು ಬಳಕೆದಾರರು ವರ್ಷದಲ್ಲಿ ಕನಿಷ್ಠ ಒಂದು ಬಾರಿ ಆದರೂ ವಾಲೆಟ್ ಮೂಲಕ ಹಣ ವರ್ಗಾವಣೆ, ಪಾವತಿ ಅಥವಾ ಇತರೆ ಹಣಕಾಸು ವ್ಯವಹಾರಗಳನ್ನು ನಡೆಸಬೇಕು. ಹೀಗೆ ಮಾಡುವುದರಿಂದ ವಾಲೆಟ್ ಸಕ್ರಿಯವಾಗಿರುತ್ತದೆ ಮತ್ತು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ.
ಫೋನ್‌ಪೇ ಈಗಾಗಲೇ ಈ ಕುರಿತು ಬಳಕೆದಾರರಿಗೆ ನೋಟಿಫಿಕೇಶನ್ ಕಳುಹಿಸಲು ಆರಂಭಿಸಿದ್ದು, ವಾಲೆಟ್ ಹೊಂದಿರುವವರು ತಮ್ಮ ಖಾತೆಯ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

