ಮೈಸೂರು ದಸರಾದಲ್ಲಿ ಕಂಬಳದ ಸದ್ದು : ಸ್ಪರ್ಧೆಗೆ ಅರ್ಜಿ ಆಹ್ವಾನ

0
54

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ಪ್ರಸಿದ್ಧ ದಸರಾ ಮಹೋತ್ಸವಕ್ಕೆ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಜಾನಪದ ಕ್ರೀಡೆಯಾದ ಕಂಬಳ ಹೊಸ ಮೆರುಗು ನೀಡಲಿದೆ. 2026ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಕಂಬಳವನ್ನು ವಿಶೇಷ ಕಾರ್ಯಕ್ರಮವಾಗಿ ಆಯೋಜಿಸಲಾಗಿದ್ದು, ಅಕ್ಟೋಬರ್ 18 ಮತ್ತು 19ರಂದು ಬೆಳಗ್ಗೆ 9ರಿಂದ ವಿಟಿಯು ಕಾಲೇಜು ಸಮೀಪ ಕಂಬಳ ನಡೆಯಲಿದೆ.

ಕರಾವಳಿಯ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳವನ್ನು ಮೈಸೂರು ದಸರಾ ಅಂಗಳಕ್ಕೆ ಪರಿಚಯಿಸುವ ಮೂಲಕ ರಾಜ್ಯದ ವಿವಿಧ ಭಾಗಗಳ ಸಾಂಸ್ಕೃತಿಕ ವೈವಿಧ್ಯತೆಯನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸುವ ಪ್ರಯತ್ನಕ್ಕೆ ಚಾಲನೆ ದೊರೆಯಲಿದೆ. ಮೈಸೂರು ದಸರಾ 2026ರ ಅಧಿಕೃತ ಉಪಸಮಿತಿ ಪಟ್ಟಿಯಲ್ಲಿ ಕಂಬಳಕ್ಕೆ ಪ್ರತ್ಯೇಕ ಉಪಸಮಿತಿಯನ್ನು ರಚಿಸಲಾಗಿದ್ದು, ಎಸ್. ಯುಕೇಶ್ ಕುಮಾರ್, ಐಎಎಸ್ ಅವರು ಉಪ ವಿಶೇಷಾಧಿಕಾರಿಯಾಗಿ, ಭೀಮಪ್ಪ ಲಾಲಿ ಕಾರ್ಯಾಧ್ಯಕ್ಷರಾಗಿ ಹಾಗೂ ಪದ್ಮನಾಭ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಕಂಬಳದ ಈ ವಿಶೇಷ ಕಾರ್ಯಕ್ರಮದಲ್ಲಿ ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಕೋಣಗಳ ಮಾಲೀಕರು ಹಾಗೂ ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ. ಸಾಂಪ್ರದಾಯಿಕ ಕಂಬಳದ ಸ್ಪರ್ಧಾತ್ಮಕ ವೈಭವವನ್ನು ಮೈಸೂರು ದಸರಾ ಉತ್ಸವದಲ್ಲಿ ಪರಿಚಯಿಸುವುದರಿಂದ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ತುಳುನಾಡಿನ ಜಾನಪದ ಸಂಸ್ಕೃತಿ ಮತ್ತು ಗ್ರಾಮೀಣ ಕ್ರೀಡೆಯ ಪರಿಚಯವಾಗಲಿದೆ.

ಮೈಸೂರು ದಸರಾ 2026ರ ಅಧಿಕೃತ ಕಾರ್ಯಕ್ರಮದಲ್ಲಿ ಕಂಬಳಕ್ಕೆ ಸ್ಥಾನ ಕಲ್ಪಿಸಿರುವುದು ಕರಾವಳಿಯ ಕ್ರೀಡಾ ಪರಂಪರೆಗೆ ದೊರೆತ ಮತ್ತೊಂದು ವೇದಿಕೆಯಾಗಿದೆ. ದಸರಾ ಕಾರ್ಯಕ್ರಮಗಳ ಪಟ್ಟಿಯಲ್ಲಿ ಕಂಬಳದ ಜೊತೆಗೆ ಗಜಪಯಣ, ಯುವ ಸಂಭ್ರಮ, ಆಹಾರ ಮೇಳ, ಕುಸ್ತಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.