ಮೈಸೂರು ದಸರಾದಲ್ಲಿ ಕಂಬಳದ ಕಲರವ : ಅ.18, 19ರಂದು ಜೋಡುಕರೆ ಕಂಬಳ

0
39

ಮಂಗಳೂರು : ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ಕರಾವಳಿಯ ಹೆಮ್ಮೆಯ ಜನಪದ ಕ್ರೀಡೆ ಕಂಬಳ ನಡೆಯಲಿದೆ. ಅ.18 ಮತ್ತು 19ರಂದು ‘ವಿಜಯ–ದಶಮಿ’ ಜೋಡುಕರೆ ಕಂಬಳ ಆಯೋಜಿಸಲಾಗಿದ್ದು, ಕರಾವಳಿ ಜಿಲ್ಲೆಗಳಿಂದ ಸುಮಾರು 150ರಿಂದ 160 ಜೊತೆ ಆಯ್ದ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮೈಸೂರು ಕಂಬಳದ ರೂವಾರಿ ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಮಂಗಳೂರಿನ ಕದ್ರಿ ಸರ್ಕಿಟ್ ಹೌಸ್‌ನಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರ ನೇತೃತ್ವದಲ್ಲಿ ಕೋಣಗಳ ಯಜಮಾನರು ಹಾಗೂ ಮೈಸೂರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.

147 ಮೀಟರ್ ಉದ್ದದ ಕಂಬಳ ಕರೆ ಸಿದ್ಧವಾಗುತ್ತಿದ್ದು, ಅ.10ರಂದು ಐದು ಜೊತೆ ಕೋಣಗಳನ್ನು ಕರೆತಂದು ಪ್ರಾಯೋಗಿಕ ಓಟ ನಡೆಸಲಾಗುವುದು. ಸ್ಪರ್ಧೆಗೆ ಕೋಣಗಳನ್ನು ಆಯ್ಕೆ ಮಾಡಲು ಪ್ರತ್ಯೇಕ ಸಮಿತಿಯನ್ನೂ ರಚಿಸಲಾಗಿದೆ.

ಅ.16ರಂದು ಪುತ್ತೂರಿನಿಂದ ಮೈಸೂರಿಗೆ ಕೋಣಗಳ ಪ್ರಯಾಣ

ಅ.16ರಂದು ಬೆಳಗ್ಗೆ 10.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಕೋಣಗಳು ಹಾಗೂ ಮಾಲೀಕರು ಸೇರಲಿದ್ದು, ಅಲ್ಲಿಂದ ಲಾರಿಗಳ ಮೂಲಕ ಒಟ್ಟಾಗಿ ಮೈಸೂರಿಗೆ ಪ್ರಯಾಣಿಸಲಿದ್ದಾರೆ. ದೀರ್ಘ ಪ್ರಯಾಣದ ನಡುವೆ ಮಡಿಕೇರಿಯಲ್ಲಿ 2ರಿಂದ 3 ಗಂಟೆಗಳ ವಿಶ್ರಾಂತಿ ನೀಡಲಾಗುತ್ತದೆ. ಕೋಣಗಳಿಗೆ ಮೇವು, ಆಹಾರ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಂದು ರಾತ್ರಿ ಮೈಸೂರು ತಲುಪಿದ ಬಳಿಕ ಅ.17ರಂದು ಕೋಣಗಳಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ.

ಅ.18ರಂದು ಕಂಬಳಕ್ಕೆ ಚಾಲನೆ

ಅ.18ರಂದು ಬೆಳಗ್ಗೆ ಮೈಸೂರು ಕಂಬಳಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ. ಅ.19ರ ಸಂಜೆಯೊಳಗೆ ಸ್ಪರ್ಧೆ ಪೂರ್ಣಗೊಳ್ಳಲಿದ್ದು, ಬಳಿಕ ಬಹುಮಾನ ವಿತರಣೆ ನಡೆಯಲಿದೆ.

ಸೀನಿಯರ್ ವಿಭಾಗದಲ್ಲಿ ಉತ್ತಮ ಸಮಯ ದಾಖಲಿಸುವ ಅರ್ಹ ಕೋಣಗಳಿಗೆ ಆದ್ಯತೆ ನೀಡಿ ಒಟ್ಟು 150ರಿಂದ 160 ಜೊತೆ ಕೋಣಗಳನ್ನು ಆಯ್ಕೆ ಮಾಡಲಾಗುತ್ತದೆ.

ಸೀನಿಯರ್ ವಿಜೇತರಿಗೆ ಚಿನ್ನದ ಬಹುಮಾನ

ಸೀನಿಯರ್ ವಿಭಾಗದ ಪ್ರಥಮ ಬಹುಮಾನವಾಗಿ 16 ಗ್ರಾಂ ಚಿನ್ನ ಹಾಗೂ ದ್ವಿತೀಯ ಬಹುಮಾನವಾಗಿ 8 ಗ್ರಾಂ ಚಿನ್ನ ನೀಡಲು ನಿರ್ಧರಿಸಲಾಗಿದೆ. ಮೂರನೇ ಹಾಗೂ ನಾಲ್ಕನೇ ಸ್ಥಾನಗಳಿಗೂ ಚಿನ್ನದ ಪದಕ ನೀಡಬೇಕು ಮತ್ತು ಜೂನಿಯರ್ ವಿಭಾಗದ ಬಹುಮಾನ ಮೊತ್ತ ಹೆಚ್ಚಿಸಬೇಕು ಎಂದು ಕೋಣಗಳ ಯಜಮಾನರು ಮನವಿ ಮಾಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಶೋಕ್ ರೈ ತಿಳಿಸಿದ್ದಾರೆ.

ಕಂಬಳದಲ್ಲಿ ಭಾಗವಹಿಸುವ ಕೋಣಗಳು ಹಾಗೂ ಮಾಲೀಕರಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು, ಭಾಗವಹಿಸುವ ಎಲ್ಲ ಕೋಣಗಳಿಗೂ ಸಾರಿಗೆ ವೆಚ್ಚ ನೀಡಲಾಗುತ್ತದೆ. ದೊಡ್ಡ ಜೊತೆ ಕೋಣಗಳಿಗೆ ₹65 ಸಾವಿರ ಹಾಗೂ ಸಣ್ಣ ಜೊತೆ ಕೋಣಗಳಿಗೆ ₹50 ಸಾವಿರ ಸಾರಿಗೆ ಭತ್ಯೆ ನಿಗದಿಪಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕಂಬಳ ವೀಕ್ಷಣೆಗೆ ಉಚಿತ ಪ್ರವೇಶ

ಮೈಸೂರು ಕಂಬಳ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಗ್ಯಾಲರಿಯಲ್ಲಿ ಏಕಕಾಲಕ್ಕೆ ಸುಮಾರು 15 ಸಾವಿರ ಮಂದಿ ಕುಳಿತು ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಕೋಣಗಳ ಮಾಲೀಕರು, ಸಿಬ್ಬಂದಿ ಹಾಗೂ ಗಣ್ಯರಿಗೆ ಪಾಸ್ ವ್ಯವಸ್ಥೆ ಇರಲಿದೆ. ಆವರಣದಲ್ಲಿ ಕೋಣಗಳೊಂದಿಗೆ ಫೋಟೊ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.

25 ಲಕ್ಷಕ್ಕೂ ಅಧಿಕ ಜನರ ನಿರೀಕ್ಷೆ

ದೇಶ-ವಿದೇಶಗಳಿಂದ ಮೈಸೂರಿಗೆ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಕಂಬಳವನ್ನು 25 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ. ಕಂಬಳದೊಂದಿಗೆ ಕರಾವಳಿಯ ಸಾಂಸ್ಕೃತಿಕ ಲೋಕವನ್ನೂ ಪರಿಚಯಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಕರಾವಳಿ ಶೈಲಿಯ ಆಹಾರ ಮೇಳ, ವಿವಿಧ ಮಳಿಗೆಗಳು, ತುಳುನಾಡಿನ ಸಾಂಪ್ರದಾಯಿಕ ತಿನಿಸುಗಳು ಹಾಗೂ ಜನಪದ ಕಲೆಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುತ್ತದೆ. ಕಂಬಳದ ವೇಳೆ ಕನ್ನಡ ಮತ್ತು ತುಳು ಭಾಷೆಯಲ್ಲಿ ವಿವರಣೆ ನೀಡುವ ವ್ಯವಸ್ಥೆಯೂ ಇರಲಿದೆ.

ಕಂಬಳ ಆಯೋಜನೆಗೆ ಕಾನೂನು ತೊಡಕಿಲ್ಲ: ಅಶೋಕ್ ರೈ

ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆಗೆ ವಿರೋಧ ವ್ಯಕ್ತವಾಗಿರುವ ಕುರಿತು ಪ್ರತಿಕ್ರಿಯಿಸಿದ ಶಾಸಕ ಅಶೋಕ್ ರೈ, ಮೈಸೂರಿನಲ್ಲಿ ಕಂಬಳ ನಡೆಸುವುದು ಸರ್ಕಾರದ ನಿರ್ಧಾರವಾಗಿದ್ದು, ಇದರಲ್ಲಿ ಯಾವುದೇ ತಪ್ಪು ಭಾವಿಸುವ ಅಗತ್ಯವಿಲ್ಲ ಎಂದರು.

ಕಂಬಳಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಕಂಬಳದ ವಿಚಾರ ಹೈಕೋರ್ಟ್‌ವರೆಗೆ ಹೋಗಿದ್ದು, ರಾಜ್ಯದ ಯಾವುದೇ ಭಾಗದಲ್ಲಿ ಕಂಬಳ ಆಯೋಜಿಸಬಹುದು ಎಂಬ ಆದೇಶ ಬಂದಿದೆ. ಈ ಬಾರಿ ಮೈಸೂರು ದಸರಾ ಉತ್ಸವದ ಭಾಗವಾಗಿಯೇ ಕಂಬಳ ನಡೆಯುತ್ತಿರುವುದರಿಂದ ಯಾವುದೇ ಕಾನೂನು ತೊಡಕಿಲ್ಲ ಎಂದು ಅವರು ತಿಳಿಸಿದ್ದಾರೆ.