ಕನಕದಾಸರ ಸಾಹಿತ್ಯ ಕೊಂಕಣಿಯಲ್ಲಿ: ಅ.3, 4ರಂದು ವಿಚಾರಸಂಕಿರಣ, ಗೀತ ಗಾಯನ

0
21

ಮಂಗಳೂರು: ಸಂತಕವಿ ಕನಕದಾಸರ ಸಮಗ್ರ ಸಾಹಿತ್ಯವನ್ನು ಕೊಂಕಣಿ ಭಾಷಿಕರಿಗೆ ಪರಿಚಯಿಸುವ ಉದ್ದೇಶದಿಂದ ‘ಕನಕದಾಸರು ಕೊಂಕಣಿಯಲ್ಲಿ’ ಎಂಬ ಎರಡು ದಿನಗಳ ವಿಶೇಷ ಕಾರ್ಯಕ್ರಮವನ್ನು ಅ.3 ಮತ್ತು 4ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ವಿಶ್ವಕೊಂಕಣಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು ವತಿಯಿಂದ ಕನಕದಾಸರ ಸಮಗ್ರ ಸಾಹಿತ್ಯವನ್ನು 14 ಭಾಷೆಗಳಿಗೆ ಅನುವಾದಿಸಿ ಪ್ರಕಟಿಸಲಾಗಿದ್ದು, ಈ ಅನುವಾದ ಗ್ರಂಥಗಳಲ್ಲಿ ಕೊಂಕಣಿ ಭಾಷೆಯ ಮೂರು ಸಂಪುಟಗಳೂ ಸೇರಿವೆ. 2026ರಲ್ಲಿ ಈ ಅನುವಾದ ಗ್ರಂಥಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದ್ದರು.

ಕೊಂಕಣಿ ಭಾಷೆಯಲ್ಲಿ ಪ್ರಕಟವಾಗಿರುವ ಕನಕದಾಸರ ಸಾಹಿತ್ಯವನ್ನು ಹೆಚ್ಚಿನ ಸಂಖ್ಯೆಯ ಕೊಂಕಣಿ ಭಾಷಿಕರಿಗೆ ತಲುಪಿಸುವ ಉದ್ದೇಶದಿಂದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಕನಕದಾಸರ ಸಾಹಿತ್ಯವನ್ನು ಕೊಂಕಣಿಗೆ ಅನುವಾದಿಸಿರುವ ತಜ್ಞರಿಂದ ಸಂಶೋಧನಾತ್ಮಕ ಪ್ರಬಂಧಗಳ ಮಂಡನೆಯೊಂದಿಗೆ ವಿಚಾರಸಂಕಿರಣ ನಡೆಯಲಿದೆ. ಇದರ ಜೊತೆಗೆ ಕನಕದಾಸರ ಕೊಂಕಣಿ ಅನುವಾದಿತ ಕೀರ್ತನೆಗಳ ಗೀತ ಗಾಯನ ಕಾರ್ಯಕ್ರಮವೂ ನಡೆಯಲಿದೆ.

ಅ.3ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕನ್ನಡದ ಪ್ರಸಿದ್ಧ ಅನುವಾದಕ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕನಕದಾಸ ಕಾವ್ಯಗಳ ಮೂರು ಸಂಪುಟಗಳನ್ನು ವಿಶ್ವವಿದ್ಯಾಲಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಜಯವಂತ ನಾಯಕ್ ಲೋಕಾರ್ಪಣೆಗೊಳಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ವಹಿಸಲಿದ್ದಾರೆ.

ಅ.3ರಂದು ಸಂಜೆ 5ರಿಂದ 7ರವರೆಗೆ ‘ಕನಕದಾಸರ ಕೀರ್ತನೆಗಳ ಕುಣಿತ ಭಜನೆ’ ಹಾಗೂ ‘ಶ್ರೀನಿವಾಸ ಕಲ್ಯಾಣ’ ಗೀತನಾಟಕ ಪ್ರದರ್ಶನ ನಡೆಯಲಿದೆ.

ವಿಚಾರಸಂಕಿರಣದಲ್ಲಿ ಡಾ. ಗೀತಾ ಶೆಣೈ, ಡಾ. ಬಿ. ದೇವದಾಸ ಪೈ, ಡಾ. ಸಂಧ್ಯಾ ನಾಯಕ್, ಡಾ. ಶೈಲಜಾ ಮಂಗಳೂರುಕಾರ, ಶಕುಂತಳಾ ಆರ್. ಕಿಣಿ, ಜಯಶ್ರೀ ಶೆಣೈ, ಮಧುಕರ ಮಲ್ಯ, ಡಾ. ಅರವಿಂದ ಶ್ಯಾನಭಾಗ್ ಹಾಗೂ ಸ್ಮಿತಾ ಶೆಣೈ ಸೇರಿದಂತೆ ಹಲವು ತಜ್ಞರು ಭಾಗವಹಿಸಲಿದ್ದಾರೆ.

ಗೀತ ಗಾಯನ ಕಾರ್ಯಕ್ರಮದಲ್ಲಿ ಪುತ್ತೂರು ನರಸಿಂಹ ನಾಯಕ್, ವಿದ್ವಾನ್ ಯೋಗೀಶ ಕಿಣಿ, ಚೈತ್ರಾ ಪೈ, ರವೀಂದ್ರ ಪ್ರಭು, ಮುರಳೀಧರ ಕಾಮತ್, ವರ್ಷಾ ಪ್ರಭು ಹಾಗೂ ಪುತ್ತೂರು ಪಾಂಡುರಂಗ ನಾಯಕ್ ಅವರು ಕನಕದಾಸರ ಕೊಂಕಣಿ ಅನುವಾದಿತ ಕೀರ್ತನೆಗಳನ್ನು ಹಾಡಲಿದ್ದಾರೆ.

ಕನಕದಾಸರ ಸಾಹಿತ್ಯದ ತತ್ವಚಿಂತನೆ, ಭಕ್ತಿ ಪರಂಪರೆ ಹಾಗೂ ಸಾಮಾಜಿಕ ಸಂದೇಶಗಳನ್ನು ಕೊಂಕಣಿ ಭಾಷೆಯ ಮೂಲಕ ಮತ್ತಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಸಂಗೀತಾಭಿಮಾನಿಗಳು ಹಾಗೂ ಕೊಂಕಣಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.