ಕಾಂತಾವರ ಕನ್ನಡ ಸಂಘದ 2026ರ ದತ್ತಿನಿಧಿ ಪ್ರಶಸ್ತಿ ಘೋಷಣೆ

0
6

ಯಕ್ಷಗಾನ ಕಲಾರಂಗ, ಡಾ. ಕೆ. ಚಿನ್ನಪ್ಪ ಗೌಡ, ಪ್ರೊ. ಮಾಧವ ಪೆರಾಜೆ ಹಾಗೂ ಡಾ. ನರೇಂದ್ರ ರೈ ದೇರ್ಲ ಅವರಿಗೆ ಪ್ರಶಸ್ತಿ

ಕಾಂತಾವರ : ಕಾಂತಾವರ ಕನ್ನಡ ಸಂಘದ 2026ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ನಾಲ್ವರು ಸಾಧಕರು ಹಾಗೂ ಸಂಸ್ಥೆಗೆ ಈ ಬಾರಿಯ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಕನ್ನಡ ಸಂಘದ ಪ್ರಕಟಣೆ ತಿಳಿಸಿದೆ.

ಸರಸ್ವತಿ ಬಲ್ಲಾಳ್ ಮತ್ತು ಡಾ. ಸಿ.ಕೆ. ಬಲ್ಲಾಳ್ ದಂಪತಿ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ‘ಕರ್ನಾಟಕ ಏಕೀಕರಣದ ನೇತಾರ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿ’ಗೆ ಉಡುಪಿಯ ಯಕ್ಷಗಾನ ಕಲಾರಂಗ ಆಯ್ಕೆಯಾಗಿದೆ.

ಡಾ. ಯು.ಪಿ. ಉಪಾಧ್ಯಾಯ ಹೆಸರಿನ ಡಾ. ವಾರಿಜ ಮಂಚಿ ಅವರ ದತ್ತಿನಿಧಿಯಿಂದ ನೀಡಲಾಗುವ 2025ನೇ ಸಾಲಿನ ‘ಮಹೋಪಾಧ್ಯಾಯ ಪ್ರಶಸ್ತಿ’ಗೆ ಡಾ. ಕೆ. ಚಿನ್ನಪ್ಪ ಗೌಡ ಹಾಗೂ 2026ನೇ ಸಾಲಿನ ಇದೇ ಪ್ರಶಸ್ತಿಗೆ ಪ್ರೊ. ಮಾಧವ ಪೆರಾಜೆ ಅವರನ್ನು ಆಯ್ಕೆ ಮಾಡಲಾಗಿದೆ. ಮೊಗಸಾಲೆ ಕುಟುಂಬದವರ ದತ್ತಿನಿಧಿಯ ‘ಮೊಗಸಾಲೆ ಸಾಹಿತ್ಯ ಪ್ರಶಸ್ತಿ’ಗೆ ಡಾ. ನರೇಂದ್ರ ರೈ ದೇರ್ಲ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂಪಾಯಿ ನಗದು, ತಾಮ್ರಪತ್ರ ಹಾಗೂ ಸನ್ಮಾನವನ್ನು ಒಳಗೊಂಡಿವೆ. ನವೆಂಬರ್ 1ರಂದು ಕಾಂತಾವರ ಕನ್ನಡ ಭವನದಲ್ಲಿ ನಡೆಯಲಿರುವ ‘ಕಾಂತಾವರ ಉತ್ಸವ–2026’ರಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕನ್ನಡ ಸಂಘದ ಪ್ರಕಟಣೆ ತಿಳಿಸಿದೆ.