ವಿಶ್ವಕೊಂಕಣಿ ಕೇಂದ್ರದಲ್ಲಿ ಮಕ್ಕಳ “ಬಾಲರಂಗ” 3 ದಿವಸಗಳ ಸನಿವಾಸ ನಾಟಕ ತರಬೇತಿ ಶಿಬಿರದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭ

0
8

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ, ‘ವರ್ಧನಿ’ ಪ್ರಾಯೋಜಕತ್ವದಲ್ಲಿ ಹಾಗೂ ಸಾಧನಾ ಬಳಗದ ಸಹಕಾರದೊಂದಿಗೆ ಆಯೋಜಿಸಲಾದ ಮಕ್ಕಳಿಗಾಗಿ ಮೂರು ದಿನಗಳ ಸನಿವಾಸ ಉಚಿತ ನಾಟಕ ತರಬೇತಿ ಶಿಬಿರ ‘ಬಾಲರಂಗ’ದ ಉದ್ಘಾಟನಾ ಸಮಾರಂಭವು ಅಕ್ಟೋಬರ್ 11ರಂದು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯಿತು.

ಎಂಆರ್‌ಪಿಎಲ್‌ನ ನಿವೃತ್ತ ಅಧಿಕಾರಿ ಡಾ. ನರೇಶ್ ರಾಮದಾಸ ಕಿಣಿ ಅವರು ದೀಪ ಪ್ರಜ್ವಲಿಸಿ ಶಿಬಿರವನ್ನು ಉದ್ಘಾಟಿಸಿದರು. ಸಂಗೀತ, ನಾಟಕ, ನೃತ್ಯ, ರಂಗಪರಿಕರ ತಯಾರಿ, ಮುಖವಾಡ ತಯಾರಿ ಹಾಗೂ ರಂಗಸಂಗೀತ ಸೇರಿದಂತೆ ವಿವಿಧ ಕಲಾ ಕೌಶಲ್ಯಗಳ ಅಭ್ಯಾಸವು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಇಂತಹ ತರಬೇತಿ ನೀಡುವ ಕಾರ್ಯವನ್ನು ವಿಶ್ವ ಕೊಂಕಣಿ ಕೇಂದ್ರ ಕೈಗೆತ್ತಿಕೊಂಡಿರುವುದು ಶ್ಲಾಘನೀಯ. ಮಕ್ಕಳು ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ವಿಶ್ವ ಕೊಂಕಣಿ ಕೇಂದ್ರದ ಕೋಶಾಧಿಕಾರಿ ಬಿ.ಆರ್. ಭಟ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕೇಂದ್ರದ ಉಪಾಧ್ಯಕ್ಷ ವಿಲಿಯಂ ಡಿಸೋಜಾ, ಡಿ. ರಮೇಶ್ ನಾಯಕ್, ಹೆಸರಾಂತ ನಾಟಕ ತರಬೇತುದಾರ ಜಗನ್ ಪವಾರ್, ಸತೀಶ್ ಪಿ. ನೀನಾಸಂ, ಅರುಣ್ ಪ್ರಕಾಶ್ ನಾಯಕ್, ಅಶೋಕ ನಾಯಕ್, ಪುಷ್ಪಲತಾ ಭಟ್ ಹಾಗೂ ಶಿಬಿರದ ಪ್ರಾಯೋಜಕಿ ವರ್ಧನಿಯ ಉಷಾ ನಂದಗೋಪಾಲ ಶೆಣೈ ಉಪಸ್ಥಿತರಿದ್ದರು. ಸಾಧನಾ ಬಳಗದ ಮುಖ್ಯಸ್ಥ ಪ್ರಕಾಶ್ ಶೆಣೈ ಅವರು ಶಿಬಿರದ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಡಿ. ರಮೇಶ್ ನಾಯಕ್ ವಂದಿಸಿದರು. ಲಕ್ಷ್ಮೀ ಕಿಣಿ ಅತಿಥಿಗಳನ್ನು ಪರಿಚಯಿಸಿದರು. ಸುಚಿತ್ರಾ ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಶೈವಿಕಾ, ಅನ್ವಿತಾ ಮತ್ತು ಪ್ರಜಕ್ತಾ ಪ್ರಾರ್ಥಿಸಿದರು.

ಸಮಾರೋಪ ಸಮಾರಂಭದಲ್ಲಿ ಮಕ್ಕಳ ಪ್ರತಿಭಾ ಅನಾವರಣ

ಅಕ್ಟೋಬರ್ 13ರಂದು ನಡೆದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ತಾವು ಕಲಿತ ಗೀತೆಗಳನ್ನು ಹಾಡಿ, ನೃತ್ಯ ಪ್ರದರ್ಶಿಸಿದರು. ಅಲ್ಲದೆ, ಶಿಬಿರದಲ್ಲಿ ಅಭ್ಯಾಸ ಮಾಡಿದ ನಾಟಕದ ಮೊದಲ ತುಣುಕನ್ನು ಪ್ರದರ್ಶಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ನಾಟಕದ ನಿರ್ದೇಶನವನ್ನು ಹೆಸರಾಂತ ರಂಗನಿರ್ದೇಶಕ ಜಗನ್ ಪವಾರ್ ನಿರ್ವಹಿಸಿದರೆ, ಪ್ರಕಾಶ್ ಶೆಣೈ ರಚನೆ, ಅರುಣ್ ಪ್ರಕಾಶ್ ನಾಯಕ್ ರಂಗಸಜ್ಜಿಕೆ, ಸತೀಶ್ ಪಿ. ನೀನಾಸಂ ವಿನ್ಯಾಸ, ಭಾವನಾ ಪ್ರಭು ಸಂಗೀತ, ಪುಷ್ಪಲತಾ ಭಟ್ ಆಟ ಹಾಗೂ ಮಂಜುಳಾ ಕಾಮತ್ ನೃತ್ಯ ತರಬೇತಿಯ ಜವಾಬ್ದಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಇವರೆಲ್ಲರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ.ಎ. ನಂದಗೋಪಾಲ ಶೆಣೈ ಅವರು ಮಾತನಾಡಿ, ‘ಬಾಲರಂಗ’ ಶಿಬಿರವು ಮಕ್ಕಳ ಶಿಕ್ಷಣದ ಜೊತೆಗೆ ಅವರ ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಅವಕಾಶ ಕಲ್ಪಿಸುತ್ತದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸುವುದರೊಂದಿಗೆ ರಂಗಾಭಿನಯದ ಬಗ್ಗೆ ಆಸಕ್ತಿ ಮೂಡಿಸುತ್ತದೆ. ಅಲ್ಲದೆ, ಮಾತೃಭಾಷೆಯ ಮೇಲಿನ ಅಭಿಮಾನವನ್ನು ಜಾಗೃತಗೊಳಿಸುವಲ್ಲಿ ಇಂತಹ ತರಬೇತಿ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಶಿಬಿರದಲ್ಲಿ ಪಾಲ್ಗೊಂಡ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸ್ವಯಂಸೇವಕರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಶಿಬಿರಾರ್ಥಿಗಳು ಮೂರು ದಿನಗಳ ತಮ್ಮ ಅನುಭವಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು. ಲಕ್ಷ್ಮೀ ಕಿಣಿ ಕಾರ್ಯಕ್ರಮ ನಿರೂಪಿಸಿದರು. ಅಶೋಕ ನಾಯಕ್ ವಂದಿಸಿದರು.

ಮೂರು ದಿನಗಳ ಈ ವಿಶೇಷ ಸನಿವಾಸ ಶಿಬಿರದಲ್ಲಿ ಸುಮಾರು 50 ಮಕ್ಕಳು ಭಾಗವಹಿಸಿದ್ದು, ಅವರಿಗೆ ಉಚಿತ ಊಟೋಪಚಾರ ಹಾಗೂ ವಸತಿ ಸೌಲಭ್ಯದೊಂದಿಗೆ ನಾಟಕ, ಸಂಗೀತ, ನೃತ್ಯ ಸೇರಿದಂತೆ ರಂಗಭೂಮಿಯ ವಿವಿಧ ಕಲೆಗಳಲ್ಲಿ ತರಬೇತಿ ನೀಡಲಾಯಿತು. ಮಕ್ಕಳ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಮಾತೃಭಾಷಾ ಪ್ರೇಮವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ‘ಬಾಲರಂಗ’ ಶಿಬಿರವು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.