ಕರಾಡ ಸಮಾಜದ ಹಿತದೃಷ್ಟಿಯಿಂದ, ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿರುವ ಹೆಮ್ಮೆಯ ‘ಕರಾಡವಾಣಿ’ ಪತ್ರಿಕೆಯು ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ.
ಕರಾಡ ಬ್ರಾಹ್ಮಣರ ಜೀವನಶೈಲಿ, ಸಂಸ್ಕೃತಿ, ಸಂಸ್ಕಾರ ಮತ್ತು ಸಾಧನೆಗಳನ್ನು ಸಮಾಜದ ಮುಂದಿಡುವ ಜೀವಂತ ಕೈಗನ್ನಡಿಯಾಗಿರುವ ಈ ಪತ್ರಿಕೆ, ಜಾಗತಿಕ ಮಟ್ಟದಲ್ಲಿ ನೆಲೆಸಿರುವ ಸಮಾಜ ಬಾಂಧವರನ್ನು ಪರಸ್ಪರ ಬೆಸೆಯುವ ಪ್ರಮುಖ ವೇದಿಕೆಯಾಗಿ ಮೂಡಿಬಂದಿದೆ.
ಈ ಐತಿಹಾಸಿಕ ರಜತ ಸಂಭ್ರಮದ ಅಂಗವಾಗಿ ಸೆಪ್ಟೆಂಬರ್ 6ರಂದು ಪೆರ್ಲದ ಭಾರತಿ ಸದನದಲ್ಲಿ ಪತ್ರಿಕೆಯ ಸಂರಕ್ಷಕರು, ಚಂದಾದಾರರು ಹಾಗೂ ಜಾಹೀರಾತುದಾರರ ಬೃಹತ್ ಸದಸ್ಯರ ಸಮಾವೇಶವು ವಿಜೃಂಭಣೆಯಿಂದ ಸಿದ್ಧತೆಯಾಗಿದೆ.
ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನಡೆಯುವ ಈ ಸಮಾವೇಶದ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 10 ಗಂಟೆಗೆ ‘ಉದಯವಾಣಿ’ ದಿನಪತ್ರಿಕೆಯ ನಿವೃತ್ತ ಉಪಸಂಪಾದಕ ನಿತ್ಯಾನಂದ ಸಜಂಗದ್ದೆ ಅವರು ಸಮಾವೇಶವನ್ನು ಉದ್ಘಾಟಿಸಿ, ವಿಶೇಷ ಸಂವಾದ ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮ ಪತ್ರಿಕೆಯ 25 ವರ್ಷಗಳ ಹಾದಿಯನ್ನು ಪರಿಚಯಿಸುವ ವೇದಿಕೆಯಾಗಲಿದೆ . ಓದುಗರು ಮತ್ತು ಸಂಪಾದಕ ಮಂಡಳಿಯ ನಡುವೆ ಮುಕ್ತ ವಿಚಾರ ವಿನಿಮಯ ಜರುಗಲಿದೆ.
ಸಮಾಜದ ಮುಖವಾಣಿಯ ಮಹಾ ಸಂರಕ್ಷಕರು, ಚಂದಾದಾರರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಸಂಯೋಜಕ ಎಸ್ ಎನ್ ಭಟ್ ಸೈಪಂಗಲ್ಲು ಮತ್ತು ಆಯೋಜಕರು ವಿನಂತಿಸಿದ್ದಾರೆ.
” ಸಮಾಜದ ಮೂಲ ಬೇರುಗಳು ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ‘ಕರಾಡವಾಣಿ’ಯಂತಹ ಸಮುದಾಯ ಪತ್ರಿಕೆಗಳು ಸಾಂಸ್ಕೃತಿಕ ಅಸ್ಮಿತೆಯ ಕಾವಲುಗೋಡೆಗಳಾಗಿವೆ. ಇಂತಹ ಪ್ರಾದೇಶಿಕ ಮಾಧ್ಯಮಗಳನ್ನು ಆರ್ಥಿಕ ಹಾಗೂ ನೈತಿಕವಾಗಿ ಬಲಪಡಿಸಿ ಬೆಂಬಲಿಸುವುದು ಅನಿವಾರ್ಯ ಕರಾಡವಾಣಿ ಸಮಾಜದ ಮುಖವಾಣಿಯಾಗಿ ಆದ್ಯತೆ ಮೇರೆಗೆ ಬೆಳೆಸುವುದು ಪ್ರತಿಯೊಬ್ಬ ಕರಾಡ ಬ್ರಾಹ್ಮಣನ ಪ್ರಮುಖ ಕರ್ತವ್ಯವಾಗಿದೆ.”
-ಮಂದಾರ ರಾಜೇಶ್ ಭಟ್

