ಅಂಗಾಂಗ ದಾನ ಪಡೆಯುವಿಕೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ

0
63

ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷ (2025) 198 ಮಂದಿ ಅಂಗಾಂಗ ದಾನ ಮಾಡಿದ್ದು, 564 ಅಂಗಾಂಗಗಳನ್ನು ದಾನವಾಗಿ ಪಡೆಯಲಾಗಿದೆ. ಇದರೊಂದಿಗೆ ಹೆಚ್ಚು ಅಂಗಾಂಗ ದಾನ ಮಾಡಿದ ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

ಅತೀ ಹೆಚ್ಚು (267) ಅಂಗಾಂಗ ದಾನ ಆಗಿರುವ ತಮಿಳುನಾಡು ಮೊದಲ ಸ್ಥಾನದಲ್ಲಿದೆ.ತೆಲಂಗಾಣ ಎರಡನೇ ಸ್ಥಾನ (205), ಕರ್ನಾಟಕ ಮೂರನೇ ಸ್ಥಾನ (198), ಮಹಾರಾಷ್ಟ್ರ ನಾಲ್ಕನೇ ಸ್ಥಾನ (153) ಹಾಗೂ ಗುಜರಾತ್ ಐದನೇ ಸ್ಥಾನದಲ್ಲಿದೆ (152) ಎಂದು ಆರೋಗ್ಯ ಇಲಾಖೆ ತಿಳಿಸಿದೆ. 2025ರಲ್ಲಿ 50 ಹೃದಯ, 29 ಶ್ವಾಸಕೋಶ, 167 ಯಕೃತ್, 306 ಕಿಡ್ನಿ, ಒಂದು ಸಣ್ಣ ಕರಳು, 76 ಹೃದಯ ಕವಾಟ ದಾನವಾಗಿ ಪಡೆಯಲಾಗಿದ್ದು, ಈ ಅಂಗಾಂಗಗಳ ಜತೆಗೆ 288 ಕಣ್ಣಿನ ಕಾರ್ನಿಯಾ ಸೇರಿ ಒಟ್ಟು 397 ಅಂಗಾಂಶಗಳನ್ನು ದಾನವಾಗಿ ಪಡೆಯಲಾಗಿದೆ. ಇವು ವರ್ಷವೊಂದರಲ್ಲಿ ದಾನವಾಗಿ ಸ್ವೀಕರಿಸಲಾದ ಗರಿಷ್ಠ ಅಂಗಾಂಶಗಳಾಗಿವೆ.

2023ರಲ್ಲಿ 178 ಮಂದಿಯಿಂದ469 ಅಂಗಾಂಗಗಳನ್ನು ದಾನವಾಗಿ ಪಡೆಯಲಾಗಿತ್ತು. 2024ರಲ್ಲಿ ದಾನಿಗಳ ಸಂಖ್ಯೆ ಇಳಿಕೆಯಾಗಿತ್ತು. ಇದರಿಂದ ಅಂಗಾಂಗಕ್ಕಾಗಿ ಕಾಯುವವರ ಸಂಖ್ಯೆ ಏರಿಕೆಯಾಗಿತ್ತು. ರಾಜ್ಯದಲ್ಲಿ ಆರೋಗ್ಯ ಇಲಾಖೆಯ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಜತೆಗೆ ವಿವಿಧ ಸರ್ಕಾರೇತರ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು ಕೂಡ ಅಂಗಾಂಗದಾನದ ಬಗ್ಗೆ ಜಾಗೃತಿ ಮೂಡಿಸಿದ್ದರ ಪರಿಣಾಮ 2025ರಲ್ಲಿ ಅಂಗಾಂಗ ದಾನಿಗಳ ಸಂಖ್ಯೆ ಹೆಚ್ಚಳವಾಗಿದೆ. ಇದು ರಾಜ್ಯದಲ್ಲಿ ಇದುವರೆಗೆ ದಾಖಲಾದ ಅತ್ಯಧಿಕ ಪ್ರಕರಣಗಳಾಗಿವೆ.


ಪ್ರಶಂಸನಾ ಪತ್ರ : ರಾಜ್ಯ ಸರ್ಕಾರವು ಅಂಗಾಂಗದಾನಕ್ಕೆ ಉತ್ತೇಜನ ನೀಡುತ್ತಿದ್ದು, ನಿರಂತರ ಜಾಗೃತಿ ಪ್ರಯತ್ನಗಳಿಂದ ಈ ಹೆಚ್ಚಳ ಸಂಭವಿಸಿದೆ. ಇದಲ್ಲದೆ ಜನವರಿ 26ರ ಗಣರಾಜ್ಯೋತ್ಸವ ಮತ್ತು ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವ ದಿನದಂದು ಮುಖ್ಯಮಂತ್ರಿ ಸೇರಿ ಸಚಿವರುಗಳ ಮೂಲಕ ದಾನಿಗಳ ಕುಟುಂಬಗಳನ್ನು ಸನ್ಮಾನಿಸಲಾಗುತ್ತಿದೆ. ಇದು ಅಂಗಾಂಗ ದಾನದ ಬಗ್ಗೆ ಜಾಗೃತಿ ಮತ್ತು ವಿಶ್ವಾಸವನ್ನು ಬೆಳೆಸುವಲ್ಲಿ ಸಹಾಯ ಮಾಡಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಒಬ್ಬ ದಾನಿಯಿಂದ 50 ಮಂದಿಗೆ ನೆರವು : ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ, ಅಂಗಾಂಗಕ್ಕಾಗಿ ಎದುರು ನೋಡುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಮಾನವ ಅಂಗಾಂಗದಾನ ಕಸಿ ಕಾಯ್ದೆ 1994 ಅಂಗಾಂಗದಾನಕ್ಕೆ ಉತ್ತೇಜನ ನೀಡುತ್ತಿದೆ. ಮಿದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ. ಒಬ್ಬ ದಾನಿಯು ಹೃದಯ, ಮೂತ್ರಪಿಂಡ, ಶ್ವಾಸಕೋಶ, ಯಕೃತ್ತು, ಸಣ್ಣ ಕರುಳು ಹಾಗೂ ಮೇದೋಜೀರಕ ಗ್ರಂಥಿ ದಾನದ ಮೂಲಕ ಎಂಟು ಜೀವಗಳಿಗೆ, ಹೃದಯದ ಕವಾಟ, ಚರ್ಮ, ಕಣ್ಣು ಸೇರಿ ವಿವಿಧ ಅಂಗಾಂಶಗಳ ನೆರವಿನಿಂದ 50 ಮಂದಿಗೆ ನೆರವಾಗಬಹುದಾಗಿದೆ ಎಂದು ಜೀವಸಾರ್ಥಕತೆ ಸಂಸ್ಥೆ ತಿಳಿಸಿದೆ.

LEAVE A REPLY

Please enter your comment!
Please enter your name here