ಕಟ್ಟೆಮಾರು ವಾರ್ಷಿಕ ಕೋಲೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ, ಗೌರವ ಅಭಿನಂದನೆ, ಸಹಾಯ ಹಸ್ತ, ಕೊಡುಗೆಗಳ ಹಸ್ತಾಂತರ

0
35

ಧರ್ಮ, ಸತ್ಯ, ಮಾನವೀಯತೆಯ ಗುಣಗಳಿಂದ ಬದುಕಿದ ಜನರನ್ನು ಪೂಜನೀಯ ಭಾವನೆಯಲ್ಲಿ ಕಾಣುವಸಂಸ್ಕೃತಿ ನಮ್ಮದು – ಸತ್ಯಜಿತ್ ಸುರತ್ಕಲ್

ಕಲ್ಲಡ್ಕ: ಧರ್ಮ, ಸತ್ಯ, ಮಾನವೀಯತೆಯ ಗುಣಗಳಿಂದ ಬದುಕಿದ ಜನರನ್ನು ಪೂಜನೀಯ ಭಾವನೆಯಲ್ಲಿ ಕಾಣುವ ಸಂಸ್ಕೃತಿ ನಮ್ಮದು ಎಂದು ಶ್ರೀ ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.

ಅವರು ಜನವರಿ 18 ಆದಿತ್ಯವಾರ ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ಶ್ರೀ ಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರ್ ನಲ್ಲಿ ಶ್ರೀಮಂತ್ರ ದೇವತೆ, ಸ್ವಾಮಿ ಕೊರಗಜ್ಜ, ಮತ್ತು ಶ್ರೀ ಗುಳಿಗ ದೈವಗಳ ವೈಭವದ ವಾರ್ಷಿಕ ಕೋಲೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಪರಶುರಾಮನ ಸೃಷ್ಟಿಯಾದ ಈ ನಮ್ಮ ತುಳುನಾಡಿನಲ್ಲಿ ದೇವಸ್ಥಾನಗಳು ದೈವಸ್ಥಾನಗಳು ಹೆಜ್ಜೆ ಹೆಜ್ಜೆಗಳಿಗೂ ನಮಗೆ ಎಚ್ಚರ ನೀಡುತ್ತಿರುತ್ತದೆ, ಕುಟುಂಬ ದೈವ, ಗ್ರಾಮದೈವ , ಮುಂತಾಗಿ ಹಲವು ಹೆಸರುಗಳೊಂದಿಗೆ ನಮ್ಮ ನಂಬಿಕೆಯನ್ನು ಬಲಪಡಿಸುತ್ತವೆ ನಮ್ಮ ಒಳ್ಳೆಯದು ಮತ್ತು ಕೆಟ್ಟದ್ದನ್ನು ಗಮನಿಸುತ್ತದೆ ಎಂಬ ವಿಚಾರವನ್ನು ನಂಬಿ ಬಂದವರು ತುಳುವರು. ಕುಟುಂಬದ ಉದ್ಧಾರಕ್ಕಾಗಿ ದೈವದ ಮುಂದೆ ಹರಕೆ ಮಾಡುವುದು ನಮ್ಮವಾಡಿಕೆ, ಧರ್ಮಕ್ಕಾಗಿ ಹೋರಾಟ ಮಾಡುವ ನಮ್ಮ ಮಣ್ಣಿನ ಗುಣ ಕಾಂತಾಬಾರೆ-ಬೂದಾಬಾರೆ, ಕೋಟಿ ಚೆನ್ನಯ್ಯರಂತಹ ಧರ್ಮಕ್ಕಾಗಿ ಬಲಿದಾನ ಮಾಡಿದ ಮಹನೀಯರನ್ನು ದೇವರ ಸ್ಥಾನದಲ್ಲಿ ಪೂಜಿಸುವ ಗೌರವ ನಮ್ಮ ನಾಡಿನಲ್ಲಿದೆ.ಹಣ ,ಅಂತಸ್ತು ಶಾಶ್ವತವಲ್ಲ ಮನುಷ್ಯ ಹೇಗೆ ಬದುಕಿದ್ದಾನೆ ಯಾವ ಹಾದಿಯಲ್ಲಿ ನಡೆದಿದ್ದಾನೆ, ಧರ್ಮ, ಸತ್ಯ, ಮಾನವೀಯತೆಯ ಗುಣಗಳಿಂದ ಬದುಕಿದ ಜನರನ್ನು ಪೂಜನೀಯ ಭಾವನೆಯಲ್ಲಿ ಕಾಣುವ ಸಂಸ್ಕೃತಿ ನಮ್ಮದು ಎಂದರು.

ಈ ಸಂದರ್ಭದಲ್ಲಿ ಸಮಾಜದಲ್ಲಿ ಸಾಧನೆ ಮಾಡಿದ ವಿವಿಧ ಗಣ್ಯರನ್ನು ಹಾಗೂ ಸಮಾಜ ಸೇವಕರನ್ನು ಗುರುತಿಸಿ ಗೌರವಿಸಲಾಯಿತು.

ವಿಶೇಷ ಸಾಧನೆ ಮಾಡಿದ ಸ್ಥಳೀಯ ಮಕ್ಕಳನ್ನು ಅಭಿನಂದಿಸಲಾಯಿತು.

ಅನಾರೋಗ್ಯ ಹಾಗೂ ಆಸಕ್ತರನ್ನು ಗುರುತಿಸಿ ತುರ್ತು ಆರೋಗ್ಯ ನಿಧಿಯನ್ನು ಕಟ್ಟೆ ಮಾರ್ ಟ್ರಸ್ಟ್ ವತಿಯಿಂದ ನೀಡಲಾಯಿತು.

ಅನಂತಾಡಿ ಗ್ರಾಮದ ಬೊಗ್ಗಂಡ ವಿಶ್ವನಾಥ ಪೂಜಾರಿ ಶುಭಾಷಿಣಿ ದಂಪತಿಗಳಿಗೆ ಕ್ಷೇತ್ರ ಸಾನಿಧ್ಯ ಹಾಗೂ ಇತರರ ಸಹಕಾರದಿಂದ ನಿರ್ಮಿಸಿಕೊಟ್ಟ ಮನೆಯ ಕೀ ಯನ್ನು, ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿಗೆ ಗಣಕಯಂತ್ರ ( ಕಂಪ್ಯೂಟರ್ ) ಹಸ್ತಾಂತರ ಮಾಡಲಾಯಿತು.

ಸಭಾ ಕಾರ್ಯಕ್ರಮದ ಮೊದಲು ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನ ಕಾರ್ಯಕ್ರಮ, ಶ್ರೀ ಚಿಂತಾಮಣಿ ಡ್ಯಾನ್ಸ್ ಗ್ರೂಪ್ ಕಡೇಶಿವಾಲಯ ಇವರಿಂದ ಹನುಮಾನ್ ಫ್ರೆಂಡ್ಸ್ ಅಮ್ಟೂರು ಪ್ರಾಯೋಜಕತ್ವದಲ್ಲಿ ಭಕ್ತಿ ಪ್ರಧಾನ ಕಾರ್ಯಕ್ರಮ ಜರಗಿತು.

ಬೆಳಿಗ್ಗೆ ಕ್ಷೇತ್ರದ ವತಿಯಿಂದ ನಿರ್ಮಾಣವಾದ ಮಹಾ ದ್ವಾರವನ್ನು ಉದ್ಘಾಟಿಸಲಾಯಿತು.

ವೇದಿಕೆಯಲ್ಲಿ ಹೆಬ್ಬಾವು ಫಾರ್ಮ್ಸ್ ಪೆನ್ಕೊಂಡ ತೆಲಂಗಾಣದ ಮುಖ್ಯಸ್ಥರಾದ ಆಶ್ರಿತ್ ಕಿಶನ್, ಬೆಂಗಳೂರಿನ ವಕೀಲರಾದ ಚಂದ್ರಪ್ರಸಾದ್ ಕೆ ಆರ್, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ರಾಜೇಶ್ ಎಲ್, ಶ್ರೀ ಕೃಷ್ಣ ಎಲೆಕ್ಟ್ರಿಕಲ್ಸ್ ಕಡಬದ ಅಭಿಲಾಷ್, ಶ್ರೀ ಮಹಾ ಪ್ರತ್ಯಂಗಿರ ದೇವಿ ಜ್ಞಾನ ಪರಮೇಶ್ವರ ಸ್ವಾಮಿ ದೇವಸ್ಥಾನದ ಗೌರೀಶ್ ಬೆಂಗಳೂರು, ಸಾಮಾಜಿಕ ಕಾರ್ಯಕರ್ತ ನವೀನ್ ರೆಡ್ಡಿ ಬೆಂಗಳೂರು, ಉದ್ಯಮಿ ಹರೀಶ್ ಶೆಟ್ಟಿ ಮುಂಬಯಿ, ದೊಡ್ಡನೆ ಕುಂಡಿ ವಾರ್ಡ್ 85ರ ಅಧ್ಯಕ್ಷ ಕಾರ್ತಿಕ್ ರೆಡ್ಡಿ, ಅಸ್ತ್ರ ಗ್ರೂಪ್ ಮುಖ್ಯಸ್ಥ ಲಾಂಚು ಲಾಲ್ ಕೆ ಎಸ್, ಮೊದಲಾದವರು ಉಪಸ್ಥಿತರಿರುವರು.

ಧಾರ್ಮಿಕ ಸಭಾ ಕಾರ್ಯಕ್ರಮದ ನಂತರ ದೊಂದಿ ಬೆಳಕಿನಲ್ಲಿ ಶ್ರೀ ಮಂತ್ರ ದೇವತೆ ದೈವದ ವೈಭವದ ವಾರ್ಷಿಕ ಕೋಲೋತ್ಸವ ಜರಗಗಿತು. ಪ್ರಮುಖರಾದ ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ, ಮಂಗಳೂರು ಕ್ಷೇತ್ರ ಸಂಸತ್ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಂಟ್ವಾಳ ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ಕ್, ಕಟ್ಟೆ ಮಾರ್ ಚಲನಚಿತ್ರ ತಂಡ, ಅಪಾರ ಸಂಖ್ಯೆಯಲ್ಲಿ ಕ್ಷೇತ್ರದ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿ ದೈವದ ಪ್ರಸಾದ ಸ್ವೀಕರಿಸಿದರು.

ಮಂತ್ರ ದೇವತಾ ಕ್ಷೇತ್ರಸಾನಿದ್ಯ ಕಟ್ಟೆಮಾರ್ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್ ಸ್ವಾಗತಿಸಿ, ಕಿಶೋರ್ ಕಟ್ಟೆ ಮಾರು ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here