ಆ.30 ರಂದು ಐಲೇಸಾದಿಂದ ತೋಜಿಲಾ‌ ಕೃಷ್ಣಾ ತುಳು ಹಾಡು ಬಿಡುಗಡೆ

0
141

ಬೆಂಗಳೂರು : ರಾಧೆಯ ಉತ್ಕಟ ಪ್ರೇಮದ ,ಭಾವ ಭಕ್ತಿಯ ಹಾಡು “ತೋಜಿಲಾ ಕೃಷ್ಣಾ” ವನ್ನು ಇಸ್ಕಾನ್ ಸೌತ್ ಬೆಂಗಳೂರಿನ ಕೃಷ್ಣ ಪರಿಚಾರಕ ಶ್ರೀ ಪ್ರಸಾದೇಶ್ವರ ಕೃಷ್ಣ ದಾಸರು ಇದೇ ಬರುವ ಆಗಷ್ಟ್ ತಿಂಗಳ 30 ನೇ ತಾರೀಖು ಸಂಜೆ 7:30 ಗಂಟೆಗೆ ವಿಶ್ವ ವೇದಿಕೆಯ ಜೂಮ್ ಜಾಲತಾಣದಲ್ಲಿ ಬಿಡುಗಡೆಗೊಳಿಸಲಿದ್ದಾರೆ.

ಹಾಡನ್ನು “ತುಲುವೆರೆ ಕಲ”ದ ಗೀತಾ‌ಲಕ್ಷ್ಮೀಶ್ ಇವರ ಪ್ರೇರಣೆಯಂತೆ ಯುವ ಸಾಹಿತಿ ಬಿ.ರಕ್ಷಿತ್ ಕರ್ಕೇರ ಬರೆದಿದ್ದು ಖ್ಯಾತ ಗಾಯಕಿ ಪ್ರೇಮಲತಾ ದಿವಾಕರ್ ಸಂಗೀತ ಸಂಯೋಜಿಸಿದ್ದಾರೆ. ಎಂದಿನಂತೆ ವಿ ಮನೋಹರ್ ವಾದ್ಯ ಸಂಯೋಜನೆ ಮಾಡಿದ್ದು ಹಾಡು ಶ್ರೀ ಕೃಷ್ಣನ ಮುರಲಿನಾದದ ಅಲೆಯೊಂದಿಗೆ ಮನಸ್ಸಿನಾಳಕ್ಕೆ ತಂಪಾಗಿ ಇಳಿಯುವಂತಿದೆ.

ತುಳು ಈಗ ವಿಶ್ವವ್ಯಾಪಿಯಾಗಿ ಬೆಳೆದಿದೆ ಅನ್ನುವುದನ್ನು ಪುಷ್ಟೀಕರಿಸುವಂತೆ ಈ ಹಾಡನ್ನು ಅಮೇರಿಕಾದ ಬೋಸ್ಟನ್ ನಿವಾಸಿ , ಕೃಷ್ಣ ಭಕ್ತ, ಭಗವದ್ಗೀತೆಯ ಪ್ರಚಾರಕ ದೀಪಕ ಜೈನ್ ಮತ್ತು ಕುಟುಂಬ ಲೋಕಕ್ಕೆ ಸಮರ್ಪಿಸಿದರೆ, ಕೆನಡಾದ ಐಲೇಸಾದ ಹಾಡುಗಾರ್ತಿ ಅಮಿತಾ ಅನುಪ್ ನಾಯಕ್ ತುಳುವಿನ ಅಮಿತ ಪ್ರೀತಿಗಾಗಿ ಬೆಂಗಳೂರಿಗೆ ಬಂದು ಹಾಡಿ ಹಿಂತಿರುಗಿದ್ದಾರೆ. ಮಿಷಿಗನ್ ತುಳುಕೂಟದ ಸಕ್ರಿಯ ಸದಸ್ಯೆ ಸ್ಮಿತಾ ರೈ ಕಾರ್ಯಕ್ರಮವನ್ನು‌ ನಡೆಸಿಕೊಡುವುದರ ಮೂಲಕ ಭಾರತವನ್ನೊಳಗೊಂಡ ನಾಲ್ಕು ದೇಶದ ತುಳುವರು ಇಲ್ಲಿ ಭಾಷೆಗಾಗಿ ಒಂದುಗೂಡಿದ್ದಾರೆ.ತಾಂತ್ರಿಕವಾಗಿ ಗೋಪಾಲ್ ಪಟ್ಟೆ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.

ಐಲೇಸಾದ ಹಾಡುಗಳ ಧ್ವನಿಗ್ರಹಣಕ್ಕೆ ಮೊದಲ ಆಶೀರ್ವಚನಗೈದಿದ್ದ ಪ್ರಸಾದೇಶ್ವರ ಕೃಷ್ಣದಾಸರು ಈ ಹಾಡನ್ನು ತುಳುವರಿಗಾಗಿ ಈ ಕೃಷ್ಣಾಷ್ಟಮಿಯ ಕಾಣಿಕೆಯಾಗಿ ಬಿಡುಗಡೆಗೊಳಿಸಿ ಸದ್ಯದಲ್ಲೇ ಲೋಕಾರ್ಪಣೆಗೊಳ್ಳುವ ತುಳು ಭಗವದ್ಗೀತೆಯ ಬಗ್ಗೆಯೂ ವಿವರ ನೀಡಲಿದ್ದಾರೆ.

ಕೃಷ್ಣ ಜನುಮದ ಸಲುವಾಗಿ ಬಿಡುಗಡೆಯಾಗುವ ಈ ಹಾಡಿನ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ ಐಲೇಸಾ ಕುಟುಂಬದವರ, ಕೃಷ್ಣ ಭಕ್ತರು ಜೂಮ್ ಸಂಖ್ಯೆ: 629 389 8593 ಮತ್ತು ಪಾಸ್ ಕೋಡ್:844917 ಬಳಸಿ ಪ್ರೀತಿ,ಅಭಿಮಾನದಿಂದ ಪಾಲ್ಗೊಳ್ಳಬೇಕೆಂದು ಮಾಧ್ಯಮ‌ ಸಂಚಾಲಕ ಸೂರಿಮಾರ್ನಾಡು ವಿನಂತಿಸಿದ್ದಾರೆ.