ಕಾಪು: ಕಾಪು ಮಾರಿಗುಡಿ ಸಮೀಪದ ಹೀರಾ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ನಾರಾಯಣ ಗುರು ಕೋಚಿಂಗ್ ಸೆಂಟರ್ ಅನ್ನು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಶಾಲಾ ಶಿಕ್ಷಣ ಮಾತ್ರ ಸಾಕಾಗುವುದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಗಮನ, ಮಾರ್ಗದರ್ಶನ ಹಾಗೂ ಕಠಿಣ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಅವಕಾಶ ಅಗತ್ಯವಾಗಿದೆ. ಟ್ಯೂಷನ್ ಕೇಂದ್ರಗಳು ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವುದಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಂಡತೀರ್ಥ ಸಮೂಹ ಸಂಸ್ಥೆಯ ಪ್ರಾಂಶುಪಾಲ ನೀಲಾನಂದ ನಾಯ್ಕ ಮಾತನಾಡಿ, ಹೊಸ ಶಿಕ್ಷಣ ಸಂಸ್ಥೆ ಅಥವಾ ತರಬೇತಿ ಕೇಂದ್ರ ಆರಂಭವಾಗುವುದು ಜ್ಞಾನದ ಹೊಸ ದೀಪ ಬೆಳಗಿದಂತೆಯೇ. ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು, ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು. ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿದಾಗ ಯಶಸ್ಸು ಸುಲಭವಾಗಿ ಸಿಗುತ್ತದೆ ಎಂದು ಸಲಹೆ ನೀಡಿದರು.
ಕಾಪು ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಪೂರಕವಾಗುವ ಉದ್ದೇಶದಿಂದ 1ರಿಂದ 10ನೇ ತರಗತಿಯವರೆಗೆ, ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರ ಜೊತೆಗೆ ಆರ್ಮಿ ನೇಮಕಾತಿ ತರಬೇತಿಯನ್ನೂ ಕೇಂದ್ರದಲ್ಲಿ ಒದಗಿಸಲಾಗುವುದು ಎಂದು ಸಂಸ್ಥೆಯವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಳೇ ಮಾರಿಗುಡಿಯ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ, ಉಮಾನಾಥ ಕಾಪು, ಸುಧಾಕರ್ ಸಾಲ್ಯಾನ್, ಕೋಚಿಂಗ್ ಸೆಂಟರ್ ಸ್ಥಾಪಕಿ ಸೌಂದರ್ಯ ಯು.ಕೆ., ವ್ಯವಸ್ಥಾಪಕ ನಿರ್ದೇಶಕ ಲೋಕೇಶ್ ಬೆಲ್ಬಡ ಕೊಡ್ಯಾಣ್, ನಿರ್ದೇಶಕ ಸಾಕ್ಷಾತ್ ಯು.ಕೆ., ಡಾ. ಮಾಧುರ್ಯ ಎಸ್. ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

