ಮಾನ್ಯ ಮುಖ್ಯಮಂತ್ರಿಗಳ ಭೇಟಿಯ ಕುರಿತು ಪ್ರಮುಖ ಪೂರ್ವಭಾವಿ ಸಭೆ

0
5

ಕರ್ನಾಟಕ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಹಾಗೂ ಕುಕ್ಕುಟ ಮಂಡಳಿ ಅಧ್ಯಕ್ಷರಾದ ವಿಜಯ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ (ಆಗಸ್ಟ್ 03, 2026) ರಂದು ಬೆಂಗಳೂರು ಪಶು ಭವನದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಭೇಟಿಯ ಕುರಿತು ಪ್ರಮುಖ ಪೂರ್ವಭಾವಿ ಸಭೆಯು ಜರುಗಿತು.

ಸಭೆಯಲ್ಲಿ ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಪ್ರತಿನಿಧಿಸಿ ‘ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ’ದ ಪದಾಧಿಕಾರಿಗಳಾದ ಅಧ್ಯಕ್ಷ ಸಯ್ಯದ್ ಹಸನ್, ಪ್ರಧಾನ ಕಾರ್ಯದರ್ಶಿ ಅಶ್ವಿನ್ ಕುಮಾರ್ ಬಿ.ಕೆ., ಸಂಘಟನಾ ಕಾರ್ಯದರ್ಶಿ ರಿತೇಶ್ ಕೊಕ್ಕಡ ಹಾಗೂ ಸದಸ್ಯ ಲಕ್ಷ್ಮಣ್ ಗೌಡ ಚಿಬಿದ್ರೆ ಸಕ್ರಿಯವಾಗಿ ಭಾಗವಹಿಸಿ ರೈತರ ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು.

ಮುಂಬರುವ ದಿನಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿರುವ ಅಧಿಕೃತ ಮನವಿ ಪತ್ರದಲ್ಲಿ ಕೋಳಿ ಸಾಕಾಣಿಕೆ ರೈತರಿಗೆ ಜಿಸಿ ದರವನ್ನು ಕನಿಷ್ಠ 10 ರೂಪಾಯಿಗಳಿಗೆ ಕಡ್ಡಾಯವಾಗಿ ನಿಗದಿಪಡಿಸುವುದು, ಪ್ರಕೃತಿ ವಿಕೋಪದಿಂದ ಕೋಳಿ ಕೇಂದ್ರಗಳಿಗೆ ಹಾನಿಯಾದಲ್ಲಿ ಸೂಕ್ತ ಪರಿಹಾರ ನೀಡುವುದು ಮತ್ತು ಕರಾವಳಿಯಲ್ಲಿ ತೀವ್ರವಾಗಿರುವ ‘ನೊಣದ ಸಮಸ್ಯೆ’ಯನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಶಾಶ್ವತ ಕ್ರಮ ಕೈಗೊಳ್ಳುವಂತೆ ಈ ಸಭೆಯಲ್ಲಿ ಒಕ್ಕೊರಲಿನಿಂದ ಒತ್ತಾಯಿಸಲಾಯಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಇತರ ರೈತ ಮುಖಂಡರು ಸಹ ಈ ಸಭೆಯಲ್ಲಿ ಉಪಸ್ಥಿತರಿದ್ದು ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದರು.