ಮಂಗಳೂರು : ತುಳು ಭಾಷೆ ಮತ್ತು ಸಂಸ್ಕೃತಿಯ ಉಳಿವು-ಬೆಳವಣಿಗೆಗೆ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಿರುವ ಟೀಂ ಐಲೇಸಾ, ಈ ಹಿಂದೆ ಭಾರೀ ಮೆಚ್ಚುಗೆ ಪಡೆದಿದ್ದ ‘ಕೃಷ್ಣ ಪಾರ್ದನ’ ಸಪ್ತೋತ್ಸವದ ಯಶಸ್ಸಿನ ಬಳಿಕ ಇದೀಗ ಮತ್ತೊಂದು ವಿಶೇಷ ಭಕ್ತಿಗೀತೆಯೊಂದಿಗೆ ಜನರ ಮುಂದೆ ಬರುತ್ತಿದೆ. ‘ತೋಜಿಲಾ ಕೃಷ್ಣ’ ಎಂಬ ಶೀರ್ಷಿಕೆಯ ಈ ಹೊಸ ತುಳು ಭಕ್ತಿಗೀತೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಯುವ ಕವಿ ರಕ್ಷಿತ್ ಕರ್ಕೇರ ಅವರ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಗೀತೆಗೆ, ಅಮೆರಿಕಾದಲ್ಲಿ ಐಲೇಸಾದ ಹಾಡುಗಳನ್ನು ಜನಪ್ರಿಯಗೊಳಿಸಿರುವ ಗಾಯಕಿ ಅಮಿತಾ ನಾಯ್ಕ್ ಧ್ವನಿ ನೀಡಿದ್ದಾರೆ. ವಿಶೇಷವಾಗಿ ಈ ಗೀತೆಯ ಧ್ವನಿಮುದ್ರಣಕ್ಕಾಗಿ ಅವರು ಅಮೆರಿಕಾದಿಂದ ಬೆಂಗಳೂರಿಗೆ ಆಗಮಿಸಿ ಹಾಡಿರುವುದು ಗಮನಾರ್ಹವಾಗಿದೆ.
ಗೀತೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಇಸ್ಕಾನ್ ಸೌತ್ ಸಂಸ್ಥೆಯ ಪ್ರಸಾದೇಶ್ವರ ಕೃಷ್ಣದಾಸರು ಬಿಡುಗಡೆಗೊಳಿಸಲಿದ್ದು, ಅಮೆರಿಕಾದ ಬೋಸ್ಟನ್‌ನಲ್ಲಿ ನೆಲೆಸಿರುವ ಕೃಷ್ಣಭಕ್ತ ದೀಪಕ್ ಜೈನ್ ಈ ಗೀತೆಯನ್ನು ತುಳುನಾಡಿಗೆ ಸಮರ್ಪಿಸಲಿದ್ದಾರೆ.
ಭಕ್ತಿ, ಸಾಹಿತ್ಯ ಹಾಗೂ ಸಂಗೀತದ ಸಮನ್ವಯದೊಂದಿಗೆ ಮೂಡಿಬಂದಿರುವ ‘ತೋಜಿಲಾ ಕೃಷ್ಣ’ ಗೀತೆ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ತುಳು ಸಂಗೀತಾಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.

