‘ಕೊರಗಜ್ಜ’ ಸಿನಿಮಾ ಅಂತಾರಾಷ್ಟ್ರೀಯ ಮಟ್ಟಕ್ಕೆ; ನಿರ್ದೇಶಕ ಸುಧೀರ್ ಅತ್ತಾವರ್‌ಗೆ ₹1.75 ಕೋಟಿ ಮೌಲ್ಯದ ಫ್ಲಾಟ್ ಉಡುಗೊರೆ

0
37

ಮಂಗಳೂರು: ಬಹುನಿರೀಕ್ಷಿತ ‘ಕೊರಗಜ್ಜ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಚಿತ್ರದ 3ಡಿ ತಾಂತ್ರಿಕ ಕಾರ್ಯಗಳು ಪ್ರಸ್ತುತ ಕೊಚ್ಚಿ ಮತ್ತು ಚೆನ್ನೈನಲ್ಲಿ ಭರದಿಂದ ಸಾಗುತ್ತಿವೆ. ತಾಂತ್ರಿಕ ಗುಣಮಟ್ಟದ ದೃಷ್ಟಿಯಿಂದ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾಕ್ಕಿಂತ ಕಡಿಮೆ ಇಲ್ಲದ ರೀತಿಯಲ್ಲಿ ಚಿತ್ರ ಮೂಡಿಬರುತ್ತಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದ್ದಾರೆ.

ಚಿತ್ರದ ಮೇಲಿನ ವಿಶ್ವಾಸ ಹಾಗೂ ನಿರ್ದೇಶಕರ ಮೂರು ವರ್ಷಗಳ ಶ್ರಮವನ್ನು ಗೌರವಿಸಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರು ಸುಧೀರ್ ಅತ್ತಾವರ್ ಅವರಿಗೆ ಸುಮಾರು ₹1.75 ಕೋಟಿ ಮೌಲ್ಯದ ಮೂರು ಬೆಡ್‌ರೂಮ್ ಐಷಾರಾಮಿ ಫ್ಲಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇತ್ತೀಚೆಗೆ ಹೊಸ ಫ್ಲಾಟ್‌ನ ಗೃಹಪ್ರವೇಶ ಹಾಗೂ ಸತ್ಯನಾರಾಯಣ ಪೂಜೆ ನೆರವೇರಿತು.

ಚಿತ್ರವು ಈಗಾಗಲೇ ಆರು ಭಾಷೆಗಳಲ್ಲಿ ಸಿದ್ಧವಾಗುತ್ತಿದ್ದು, ಇದೀಗ ಅಸ್ಸಾಮಿ, ಚೈನೀಸ್ ಮತ್ತು ಇಂಗ್ಲಿಷ್ ಭಾಷೆಗಳಿಗೂ ಡಬ್ ಆಗುತ್ತಿದೆ. ಹಾಂಕಾಂಗ್ ಮತ್ತು ಬೀಜಿಂಗ್ ಮೂಲದ ವಿತರಣಾ ಸಂಸ್ಥೆಗಳು ಚಿತ್ರದ ವಿತರಣೆಗೆ ಆಸಕ್ತಿ ತೋರಿದ್ದು, ಚಿತ್ರತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಗೃಹಪ್ರವೇಶದ ಸಂದರ್ಭದಲ್ಲಿ ಕೊರಗಜ್ಜ ದೈವದ ಅಗೆಲು ಸೇವೆಯನ್ನೂ ವಿಶೇಷವಾಗಿ ನೆರವೇರಿಸಲಾಯಿತು. ಚಿತ್ರದಲ್ಲಿ ಅಭಿನಯಿಸಿರುವ ಹಿರಿಯ ನಟಿ ಭವ್ಯ ಅವರು ದೈವಕ್ಕೆ ಪ್ರಿಯವಾದ ಕುಚಲಕ್ಕಿ ಅನ್ನ, ಹುರುಳಿ-ಬಸಳೆ ಸಾರು, ಮಿಡಿ ಮಾವಿನ ಉಪ್ಪಿನಕಾಯಿ, ಬಂಗುಡೆ ಮೀನಿನ ಗಸಿ, ಕೋಳಿ ಸುಕ್ಕ ಹಾಗೂ ಕಳ್ಳು ಸೇರಿದಂತೆ ವಿವಿಧ ನೈವೇದ್ಯಗಳನ್ನು ಸಮರ್ಪಿಸಿದರು. ನಿರ್ದೇಶಕರ ಪತ್ನಿ ರಾಜಶ್ರೀ ಸುಧೀರ್ ಈ ಭಕ್ಷ್ಯಗಳ ಸಿದ್ಧತೆಯಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭವ್ಯ, “ಕೊರಗಜ್ಜ ಸಿನಿಮಾ ನನ್ನನ್ನು ಇನ್ನಷ್ಟು ದೈವಭಕ್ತಳನ್ನಾಗಿಸಿದೆ. ಚಿತ್ರದಲ್ಲಿ ಕೊರಗಜ್ಜನಿಗೆ ಮೊದಲ ಅಗೆಲು ಸೇವೆ ಸಲ್ಲಿಸುವ ರಾಣಿ ಪಂಜಂದಾಯಿ ಪಾತ್ರವನ್ನು ನಿರ್ವಹಿಸಿದ್ದೇನೆ. ಈಗ ನಿಜ ಜೀವನದಲ್ಲೂ ಅಗೆಲು ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ” ಎಂದು ಸಂತಸ ವ್ಯಕ್ತಪಡಿಸಿದರು.

ಸುಮಾರು ₹40 ಕೋಟಿಗೂ ಅಧಿಕ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ತುಳುನಾಡಿನ ಸಂಸ್ಕೃತಿ, ನಂಬಿಕೆ ಮತ್ತು ದೈವ ಆರಾಧನೆಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವ ನಿರೀಕ್ಷೆ ಮೂಡಿಸಿದ್ದು, ಆಗಸ್ಟ್ ತಿಂಗಳಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here