ಕೆಎಸ್‌ಆರ್‌ಟಿಸಿ ಬಸ್–ಬೈಕ್ ಡಿಕ್ಕಿ : 26ರ ಹರೆಯದ ಯುವಕ ಸ್ಥಳದಲ್ಲೇ ಸಾವು

0
225

ಉಜಿರೆ–ಧರ್ಮಸ್ಥಳ ಮಾರ್ಗದ ನೀರಚಿಲುಮೆ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ಮತ್ತೋರ್ವ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಮಡಂತ್ಯಾರ್ ನಿವಾಸಿ ಸನತ್ ಯಾನೆ ಸೋಮನಾಥ್ (26) ಎಂದು ಗುರುತಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸನತ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಬೈಕ್‌ನ ಹಿಂಬದಿ ಸವಾರನಿಗೂ ತೀವ್ರ ಗಾಯಗಳಾಗಿದ್ದು, ಅಪಘಾತದ ಬಳಿಕ ಸ್ಥಳೀಯರು ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದ ಸುದ್ದಿ ತಿಳಿದು ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಕ್ಕೆ ನೆರವಾದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ನಿಖರ ಕಾರಣ ತಿಳಿದುಬರಬೇಕಿದೆ.