ತೆರೆದ ಬಾವಿಗೆ ಬಿದ್ದ ಚಿರತೆ : ಅರಣ್ಯ ಇಲಾಖೆಯಿಂದ ರಕ್ಷಣೆ

0
24

ಬೆಳ್ತಂಗಡಿ : ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಚಿರತೆಯೊಂದು ಆಕಸ್ಮಿಕವಾಗಿ ಸುಮಾರು 30 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿದ ಘಟನೆ ತಾಲೂಕಿನ ಕರಿಮಣೇಲು ಗ್ರಾಮದ ಬಕ್ಕರಡ್ಡ ಸಮೀಪ ಸೆ.21ರಂದು ನಡೆದಿದೆ.

ಬಕ್ಯರಡ್ಕ ನಿವಾಸಿ ಅಶೋಕ ಪೂಜಾರಿ ಅವರಿಗೆ ಸೇರಿದ ಬಾವಿಗೆ ಚಿರತೆ ಬಿದ್ದಿತ್ತು. ಸುಮಾರು 30 ಅಡಿ ಆಳದ ಈ ಬಾವಿಯಲ್ಲಿ ಸುಮಾರು 6 ಅಡಿ ನೀರಿದ್ದು, ಬೆಳಗ್ಗೆ ಮನೆಯವರು ಬಾವಿಯ ಬಳಿ ತೆರಳಿದಾಗ ಚಿರತೆ ಬಿದ್ದಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.

ಮಾಹಿತಿ ಲಭಿಸಿದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಗ್ರಾಮಸ್ಥರ ಸಹಕಾರದೊಂದಿಗೆ ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವ ಕಾರ್ಯಾಚರಣೆ ಕೈಗೊಳ್ಳಲಾಯಿತು. ಕಾರ್ಯಾಚರಣೆಯ ವೇಳೆ ಚಿರತೆಗೆ ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿ, ಬಾವಿಯಿಂದ ಚಿರತೆಯನ್ನು ಯಶಸ್ವಿಯಾಗಿ ಹೊರತೆಗೆದು ರಕ್ಷಿಸಲಾಯಿತು.

ಚಿರತೆ ಬಾವಿಗೆ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸಾರ್ವಜನಿಕರು ಕೂಡ ಜಮಾಯಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸುವ ಮೂಲಕ ಸ್ಥಳೀಯರಲ್ಲಿ ಉಂಟಾಗಿದ್ದ ಆತಂಕವನ್ನು ನಿವಾರಿಸಿದರು.

ಕುಂದಾಪುರ ವಿಭಾಗದ ಡಿಎಫ್‌ಒ ರುತ್ರನ್ ಹಾಗೂ ಮೂಡುಬಿದಿರೆ ಎಸಿಎಫ್ ಆಕಾಶ್ ಕದಂ ಅವರ ಮಾರ್ಗದರ್ಶನದಲ್ಲಿ ವೇಣೂರು ಆರ್‌ಎಫ್‌ಒ ಭರತ್, ಡಿಆರ್‌ಎಫ್‌ಒ ಅಶ್ವಿತ್, ಅರಣ್ಯ ರಕ್ಷಕ ದಿವಾಕರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ನಿವಾಸಿಗಳೂ ರಕ್ಷಣಾ ಕಾರ್ಯಕ್ಕೆ ಸಹಕರಿಸಿದರು.