ಉಡುಪಿ : ತಂತ್ರಜ್ಞಾನದ ಈ ಆಧುನಿಕ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು 2 ನಿಮಿಷದ ರಿಲ್ಸ್ ನೋಡುವ ಅಭ್ಯಾಸ ಹೆಚ್ಚಾಗಿ ಬೆಳೆಯುತ್ತಿದೆ. ಪುಸ್ತಕಗಳನ್ನು ಓದುವುದರಿಂದ ಜೀವನದ ಬಗ್ಗೆ ಆಳವಾದ ಜ್ಞಾನ ದೊರಕುತ್ತದೆ. ಜನರು ಸ್ಥಳೀಯ ಲೇಖಕರು ಬರೆದ ಪುಸ್ತಕಗಳನ್ನು ಓದಬೇಕು, ಈ ಮೂಲಕ ಲೇಖಕರ ಪರಿಚಯವಾಗಿ ಅವರ ಮತ್ತು ಓದುಗರ ಮಧ್ಯೆ ಸಂಪರ್ಕ ಏರ್ಪಡುತ್ತದೆ. ಪುಸ್ತಕ ಓದುವ ಹವ್ಯಾಸವನ್ನು ಸಂಸ್ಕೃತಿಯಾಗಿ ಬೆಳೆಸಿಕೊಳ್ಳೋಣ. ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಹೇಳಿದರು.
ಕರ್ನಾಟಕ ಸರಕಾರ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಉಡುಪಿ, ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ ಅಜ್ಜರಕಾಡಿನ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ಹಾಗೂ ಗ್ರಂಥಾಲಯದಲ್ಲಿ ನಮ್ಮ ಸಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಂಥಾಲಯಗಳು ಸಮುದಾಯದ ಚಟುವಟಿಕೆಗಳ ಕೇಂದ್ರ ಬಿಂದು ಗಳಾಗಬೇಕು. ನಾವು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಪುಸ್ತಕಗಳು ಸಹಕಾರಿ. ಪುಸ್ತಕ ಗಳಲ್ಲಿ ಲೇಖಕರ ದೃಷ್ಟಿ ಕೋನದ ಪರಿಚಯ ವಾಗುತ್ತದೆ. ಜೀವನವನ್ನು ವಿವಿಧ ಆಯಾಮಗಳಲ್ಲಿ ನೋಡಲು ಪುಸ್ತಕ ನಮಗೆ ಸಹಾಯ ಮಾಡುತ್ತದೆ. ವೈದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರಗಳ ಆಚೆಗೂ ಹಲವಾರು ಕ್ಷೇತ್ರಗಳಿವೆ ಎಲ್ಲ ಕ್ಷೇತ್ರಗಳ ಬಗ್ಗೆ ಜ್ಞಾನ ಹೊಂದಿದಾಗ ಜೀವನ ಪರಿಪೂರ್ಣತೆ ಪಡೆಯುತ್ತದೆ ಎಂದ ಅವರು ಗ್ರಂಥಾಲಯದಲ್ಲಿ ನಮ್ಮ ಸಾಹಿತ್ಯ ಕಾರ್ಯಕ್ರಮಕ್ಕೆ ಸಾರ್ವಜನಿಕರ ಬೆಂಬಲ ಅಗತ್ಯ ಎಂದರು.
ಗ್ರಂಥಾಲಯದಲ್ಲಿ ನಮ್ಮ ಸಾಹಿತಿ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಾಹಿತಿ ಡಾ. ಪಾರ್ವತಿ ಜಿ ಐ ತಾಳ್ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಮಾತನಾಡಿ, ಡಿಜಿಟಲ್ ಜಗತ್ತಿನಲ್ಲಿ ನಮ್ಮ ಏಕಾಗ್ರತೆ ಬಹಳ ಕಡಿಮೆಯಾಗಿದೆ ಹಾಗಾಗಿ ನಮ್ಮಲ್ಲಿ ಯಾವುದೇ ವಿಷಯದ ಬಗ್ಗೆ ಆಳವಾದ ಜ್ಞಾನ ಇರುವುದಿಲ್ಲ. ಜೀವನದಲ್ಲಿ ಯಾವುದೇ ವಿಷಯದ ಬಗ್ಗೆ ಆಳವಾದ ಅಧ್ಯಯನದ ಅವಶ್ಯಕತೆ ಇದೆ. ಇಂದಿನ ಶಿಕ್ಷಣವೂ ಕೂಡ ಅಂಕ ಕೇಂದ್ರವಾಗಿರುವುದರಿಂದ ಅಂಕಗಳಿಗೆಯನ್ನೇ ಜೀವನದ ಉದ್ದೇಶವಾಗಿಟ್ಟುಕೊಂಡಿರುತ್ತೇವೆ ಹಾಗಾಗಿ ನಮ್ಮಲ್ಲಿ ಜ್ಞಾನ ಮತ್ತು ಕೌಶಲ್ಯದ ವಿಕಸನವಾಗುವುದಿಲ್ಲ ಪುಸ್ತಕ ಓದುವುದರಿಂದ ಒಂದು ವಿಷಯ ಮತ್ತು ಪ್ರಪಂಚದ ಬಗ್ಗೆ ಆಳವಾದ ಜ್ಞಾನ ದೊರಕುತ್ತದೆ ನನಗೂ ಮತ್ತು ನನ್ನ ಮಗನಿಗೂ ಪುಸ್ತಕ ಓದುವ ಹವ್ಯಾಸವಿದೆ ಎಲ್ಲರೂ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗ್ರಂಥ ಪಾಲಕರ ದಿನಾಚರಣೆಯ ನಿಮಿತ್ತ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್ ಪಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥ ಪಾಲಕಿ ವನಿತಾ ಉಪಸ್ಥಿತರಿದ್ದರು.
ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಸುರೇಖಾ ಸ್ವಾಗತಿಸಿ, ಗ್ರಂಥ ಪಾಲಕಿ ರಂಜಿತ ಬಹುಮಾನ ವಿತರಣೆ ವಿವರ ವಾಚಿಸಿ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸತೀಶ್ ಕೂಡವೂರು ನಿರೂಪಿಸಿ ವಂದಿಸಿದರು.

