ಉಡುಪಿ : ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕರಾಗಿ ಸಾಮಾಜಿಕ ಕಾರ್ಯಕರ್ತ ಹಾಗೂ ರಕ್ತದಾನಿ ರಮೇಶ್ ಕರ್ಕೇರ ಉಗ್ಗೆಲ್ಬೆಟ್ಟು ಅವರನ್ನು ನೇಮಕ ಮಾಡಲಾಗಿದೆ.
ನಿರಂತರವಾಗಿ ರಕ್ತದಾನ ಮಾಡುತ್ತಿರುವ ರಮೇಶ್ ಕರ್ಕೇರ ಅವರು ಹಲವು ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆಯೇ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ದೇಹದಾನಕ್ಕೆ ನೋಂದಣಿ ಮಾಡಿಕೊಂಡಿರುವ ಅವರು, ದೇಹಾಂಗದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲೂ ಸಕ್ರಿಯರಾಗಿದ್ದಾರೆ.
ರಮೇಶ್ ಕರ್ಕೇರ ಅವರ ಸಮಾಜಮುಖಿ ಚಟುವಟಿಕೆಗಳಿಂದ ಪ್ರೇರಿತರಾಗಿ ಹಲವರು ಅಂಗಾಂಗದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ರಾಜಕೀಯ, ಧಾರ್ಮಿಕ ಹಾಗೂ ಸಹಕಾರ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು, ಸಮಾಜ ಸೇವೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ.
ಅಂಗಾಂಗದಾನದ ಮಹತ್ವದ ಕುರಿತು ಮಾತನಾಡಿದ ರಮೇಶ್ ಕರ್ಕೇರ, “ಪ್ರಸ್ತುತ ಪರಿಸ್ಥಿತಿಯಲ್ಲಿ ರಕ್ತದಾನದಷ್ಟೇ ಅಂಗಾಂಗದಾನದ ಮಹತ್ವವೂ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕಿದೆ. ಸಹೃದಯಿಗಳ ಸಹಕಾರ ಹಾಗೂ ಪ್ರೋತ್ಸಾಹದೊಂದಿಗೆ, ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿಯ ಮಾರ್ಗದರ್ಶನದಲ್ಲಿ ನನ್ನ ಕೈಲಾದಷ್ಟು ಸೇವೆ ಸಲ್ಲಿಸುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮನ್ನು ಉಡುಪಿ ಜಿಲ್ಲಾ ಸಂಚಾಲಕರಾಗಿ ಗುರುತಿಸಿ ಅವಕಾಶ ನೀಡಿದ ಸಮಿತಿಯವರಿಗೆ ಹಾಗೂ ತಮ್ಮ ಸೇವಾ ಚಟುವಟಿಕೆಗಳಿಗೆ ನಿರಂತರವಾಗಿ ಪ್ರಚಾರ ನೀಡುತ್ತಿರುವ ಸುದ್ದಿ ಮಾಧ್ಯಮಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ನಿರಂತರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರಮೇಶ್ ಕರ್ಕೇರ ಅವರ ನೇಮಕದಿಂದ ಉಡುಪಿ ಜಿಲ್ಲೆಯಲ್ಲಿ ದೇಹಾಂಗದಾನದ ಕುರಿತು ಮತ್ತಷ್ಟು ಜಾಗೃತಿ ಮೂಡಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ.
ರಮೇಶ್ ಕರ್ಕೇರ ಅವರಿಗೆ ಶುಭ ಹಾರೈಸಿರುವ ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಅವರ ಸಮಾಜಮುಖಿ ಸೇವೆ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದ್ದಾರೆ.

