ಉಡುಪಿ: ಆಯುರ್ವೇದ ಕೇವಲ ಒಂದು ವೈದ್ಯಕಿಯ ಪದ್ಧತಿಯಲ್ಲ, ಅದು ಜೀವನ ಶೈಲಿ. ನಮ್ಮ ಬದುಕಿನ ಅವಿಭಾಜ್ಯ ಅಂಗ. ಆಯುರ್ವೇದ, ಯುನಾನಿ, ಹೋಮಿಯೋಪತಿ, ಯೋಗ ಮುಂತಾದ ಚಿಕಿತ್ಸಾ ಪದ್ದತಿಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸುಂದರವಾಗಿರುತ್ತದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಬ್ರಹ್ಮಗಿರಿಯ ಬಾಲಭವನದಲ್ಲಿ ನಡೆದ ಆರೋಗ್ಯಕರ ನಾಳೆಗಳಿಗಾಗಿ ಆಯುರ್ವೇದ ಘೋಷ ವಾಕ್ಯದೊಂದಿಗೆ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಧನ್ವಂತರಿ ಮತ್ತು ಆಯುರ್ವೇದ ಈ ದೇಶದ ಸ್ವತ್ತು. ಋಷಿ-ಮುನಿಗಳ ಅನುಭವ ಮತ್ತು ತಪಸ್ಸಿನ ಫಲ ಆಯುರ್ವೇದ. ಎಲ್ಲ ಸಮುದಾಯದ ಜನರು ಆಯುರ್ವೇದ ವೈದ್ಯ ಪದ್ಧತಿಯನ್ನು ಅನುಸರಿಸಿ ಉತ್ತಮ ಆರೋಗ್ಯವನ್ನು ಹೊಂದುತ್ತಿದ್ದಾರೆ. ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಅನಾವಶ್ಯಕವಾಗಿ ಮಾತ್ರ ನುಂಗುವ ಬದಲಿಗೆ ಆಯುರ್ವೇದ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ರೋಗವನ್ನು ಬುಡಸಮೇತ ನಿಮೂರ್ಲನೆ ಮಾಡಬಹುದು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ಶ್ರೀಧರ ಬಾಯರಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ. ಮಹಮ್ಮದ್ ಇಕ್ಬಾಲ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಸಂಘದ ಅಧ್ಯಕ್ಷೆ ಡಾ. ಹೇಮಲತಾ ಮತ್ತಿತರರು ಉಪಸ್ಥಿತರಿದ್ದರು.
ಡಾ. ವಿನಯ, ಡಾ. ಮಾನಸ ಪ್ರಾರ್ಥಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ಸವೋರ್ತ್ತಮ ಶೆಟ್ಟಿ ನಿರೂಪಿಸಿ, ಡಾ. ಪ್ರದಿಪ್ ಆರ್ ಶೆಟ್ಟಿ ವಂದಿಸಿದರು.

