1952 ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ: ಜಿಲ್ಲಾಧಿಕಾರಿ

0
22


ಉಡುಪಿ : ಜಿಲ್ಲೆಯಲ್ಲಿ 6 ಚಕ್ರ ಮತ್ತು ಮೇಲ್ಪಟ್ಟ 3785 ಸರಕು ಸಾಗಾಣಿಕೆ ವಾಹನಗಳಿದ್ದು, ಅವುಗಳಲ್ಲಿ 1952 ವಾಹನಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಲಾಗಿದೆ. 1800 ಕ್ಕೂ ಹೆಚ್ಚು ಅಳವಡಿಕಿಗೆ ಬಾಕಿ ಇದೆ. ಮುಂದಿನ ಒಂದು ತಿಂಗಳ ಒಳಗಾಗಿ ಪ್ರತಿಯೊಂದು ವಾಹನಕ್ಕೂ ಸ್ಪೀಡ್ ಗವರ್ನರ್ ಅಳವಡಿಸಲು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಿದ್ಧ ಕಾಂಕ್ರೀಟ್ ಮಿಕ್ಸಿಂಗ್ ವಾಹನಗಳು ಓವರ್ ಲೋಡ್ನಿಂದಾಗಿ ರಸ್ತೆ ಮೇಲೆ ಕಾಂಕ್ರೀಟ್ ಎಲ್ಲೆಡೆ ಬಿದ್ದು ರಸ್ತೆ ಹಾಳಾಗುತ್ತಿದೆ. ಮರಳು ಸಾಗಾಣಿಕೆ ವಾಹನಗಳ ಓವರ್ ಲೋಡ್ನಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಅಪಘಾತಗಳು ನಡೆಯುತ್ತಿವೆ. ಕಳೆದ ಮೂರು ತಿಂಗಳಲ್ಲಿ 1569 ವಾಹನಗಳ ತಪಾಸಣೆ ನಡೆಸಿ, 15 ಪ್ರಕರಣಗಳನ್ನು ದಾಖಲಿಸಿ, 3.33 ಲಕ್ಷ ರೂ. ದಂಡ ವಸೂಲಾತಿಯಾಗಿದೆ. ಈ ಬಗ್ಗೆ ಮುಂದಿನ ದಿವಸಗಳಲ್ಲಿ ತೀವ್ರ ತಪಾಸಣೆ ನಡೆಸುವಂತೆ ಸೂಚಿಸಿದರು.
ತಳ್ಳುಗಾಡಿಗಳ ಸ್ಥಳಾಂತರಕ್ಕೆ ಸೂಚನೆ
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಅನಧಿಕೃತವಾಗಿರುವ ಗೂಡಂಗಡಿ, ಫಾಸ್ಟ್ ುಡ್ ಸೆಂಟರ್, ತಳ್ಳುಗಾಡಿ ಹಾಗೂ ಗೂಡಂಗಡಿಗಳನ್ನು ಈಗಾಗಲೇ ನಗರಸಭಾ ವ್ಯಾಪ್ತಿಯಲ್ಲಿ ಗುರುತಿಸಲಾದ 6 ವೆಂಡಿಂಗ್ ಝೊನ್ಗಳಿಗೆ ಸ್ಥಳಾಂತರಿಸಬೇಕು. ಈ ಝೊನ್ಗಳಲ್ಲಿ ಶೀಘ್ರವಾಗಿ ಶೆಲ್ಟರ್ಗಳನ್ನು ನಿರ್ಮಿಸಲು ಕ್ರಮವಹಿಸುವಂತೆ ನಗರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಮುಖ ಜಂಕ್ಷನ್ಗಳಲ್ಲಿ ಸಿಗ್ನಲ್ ಲೈಟ್
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಪ್ರಮುಖ 5 ಜಂಕ್ಷನ್ಗಳಿದ್ದು, ಕಲ್ಸಂಕ ಮತ್ತು ಮಣಿಪಾಲ ಸಿಂಡಿಕೇಟ್ ಸರ್ಕಲ್ ಜಂಕ್ಷನ್ನಲ್ಲಿ ಈಗಾಗಲೇ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಉಳಿದ ಸ್ಥಳಗಳಿಗೆ ಶ್ರೀ ಸಿಗ್ನಲ್ ಹಾಕಬೇಕು. ಪಡುಬಿದ್ರೆ, ಕೋಟಾ, ಬ್ರಹ್ಮಾವರ ಹಾಗೂ ಕುಂದಾಪುರದ ಪ್ರಮುಖ ಜಂಕ್ಷನ್ಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸುವಂತೆ ಸೂಚನೆ ನೀಡಿದರು.

ಶಾಲಾ ಕಾಲೇಜು ಬಳಿ ವೇಗತಡೆ ಅಳವಡಿಸಿ
ಜಿಲ್ಲೆಯಲ್ಲಿರುವ ಶಾಲಾ-ಕಾಲೇಜುಗಳ ಪರಿಮಿತಿಯ ರಸ್ತೆಗಳಲ್ಲಿ ಸೂಚನಾ ಫಲಕಗಳು, ವೇಗತಡೆ ಉಬ್ಬುಗಳು, ಬ್ಯಾರಿಕೇಡ್, ಝೀಬ್ರಾ ಪಟ್ಟಿ ಸೇರಿದಂತೆ ಮತ್ತಿತರ ಅಗತ್ಯ ಸುರಕ್ಷತಾ ಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ರಸ್ತೆ ಅಪಘಾತವಾಗುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸೂಚನಾ ಫಲಕ, ಹಂಪ್ಸ್, ಬೀದಿ ದೀಪಗಳನ್ನು ಅಳವಡಿಸಲು ಮುಂದಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಪೌರಾಯುಕ್ತ ಮಹಾಂತೇಶ ಹಂಗರಗಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್, ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ ಮತ್ತಿತರರು ಉಪಸ್ಥಿತರಿದ್ದರು.