ಉಡುಪಿ : ಜನರ ಸಮಸ್ಯೆ ಹಾಗೂ ಅಹವಾಲುಗಳನ್ನು ಅವರಿರುವಲ್ಲಿಯೇ ಆಲಿಸಿ, ಸ್ಥಳದಲ್ಲಿಯೇ ಪರಿಹಾರ ನೀಡಲು ಸರಕಾರವು ಮಹತ್ವಕಾಂಕ್ಷಿ ಯೋಜನೆಯಾದ ಪ್ರಜಾಸೇವಾ ಆಂದೋಲನ ಸಭೆಗಳನ್ನು ರಾಜ್ಯದಾದ್ಯಂತ ಆಯೋಜಿಸುವುದರೊಂದಿಗೆ ಆ ಮೂಲಕ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಹೇಳಿದರು.
ಅವರು ಇಂದು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಪ್ರಜಾಸೇವಾ ಇಲಾಖೆ ಹಾಗೂ ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸೆಪ್ಟೆಂಬರ್ 5 ರಂದು ವಿಜಯನಗರ ಜಿಲ್ಲೆಯಲ್ಲಿ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಜಾಸೇವೆ ಆಂದೋಲನ ಸಭೆಗೆ ಚಾಲನೆ ನೀಡಿದ್ದು, ರಾಜ್ಯದಾದ್ಯಂತ ಏಕಕಾಲಕ್ಕೆ ಕಾರ್ಯಕ್ರಮ ಆಯೋಜಿಸಲು ನಿರ್ಧಾರಿಸಲಾಗಿತ್ತು. ಆದರೆ ಉಡುಪಿಯಲ್ಲಿ ಆ ದಿನದಂದು ಜಿಲ್ಲೆಯ ಜನತೆಯ ಅತೀ ದೊಡ್ಡ ಹಬ್ಬವಾದ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ಇದ್ದು, ಸಾರ್ವಜನಿಕರು ಈ ಸಂದರ್ಭದಲ್ಲಿ ತಮ್ಮ ಅಹವಾಲು/ ಸಮಸ್ಯೆಗಳನ್ನು ಸಲ್ಲಿಸಲು ಅಸಾಧ್ಯವೆಂದು ತಿಳಿದು ಈ ದಿನದಂದು ಸಭೆ ಆಯೋಜಿಸಲಾಗಿದೆ ಎಂದರು.
ಸರಕಾರ ಹಾಗೂ ಜನರ ನಡುವಿನ ಸಂಬಂಧ ಯಾವಾಗಲು ಗಟ್ಟಿಯಾಗಿರಬೇಕು. ಸರಕಾರ ಇರುವುದೇ ಜನರ ಸೇವೆಗಳನ್ನು ಮಾಡಲು. ಸರಕಾರದ ಸೇವೆ ಪಡೆಯಲು ಜನ ಕಚೇರಿಗಳಿಗೆ ವಾರ ತಿಂಗಳುಗಟ್ಟಲೆ ಅಲೆಯುವ ಪರಿಸ್ಥಿತಿಯನ್ನು ಕಂಡು ಇದನ್ನು ತಪ್ಪಿಸಲು ಅವರ ಅಹವಾಲುಗಳಿಗೆ ಸ್ಪಂದಿಸಲು ಪ್ರಜಾಸೇವೆ ಇಲಾಖೆಯ ಮೂಲಕ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಆಂದೋಲನ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಜನಸಾಮಾನ್ಯರ ಅಹವಾಲು/ಸಮಸ್ಯೆಗಳಿಗೆ ಸರಕಾರದ ಮಟ್ಟದಲ್ಲಿ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸಲಾಗುವುದು ಎಂದರು.
ಜನರು ಯಾವ ಸಮಸ್ಯೆಗಳಿಂದ ಹೈರಾಣಗಿದ್ದಾರೆ, ಅವರ ಪರಿಸ್ಥಿತಿಯನ್ನು ಅರಿತು ಅದನ್ನು ಮೌಲ್ಯಮಾಪನ ಮಾಡಲು ಪಾಲಿಸಿ ತರುವುದೇ ಸರಕಾರದ ಕೆಲಸ. ಆಯಾ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಒಂದನೇ ಹಾಗೂ ಮೂರನೇ ಶನಿವಾರದಂದು ತಾಲೂಕು ಮಟ್ಟದಲ್ಲಿ ಹಾಗೂ ಎರಡು ಮತ್ತು ನಾಲ್ಕನೇ ಶನಿವಾರದಂದು ಹೋಬಳಿ ಮಟ್ಟದಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಸೂಕ್ತ ಪರಿಹಾರವನ್ನು ಅವರಿರುವಲ್ಲಿಯೇ ಒದಗಿಸಲಿದ್ದಾರೆ ಎಂದ ಅವರು ಪ್ರತಿ ಬುಧವಾರ ಜಿಲ್ಲಾಧಿಕಾರಿಗಳು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅರ್ಜಿಗಳನ್ನು ಫಾಲೋಆಪ್ ಮಾಡಲಿದ್ದಾರೆ ಎಂದರು.
ನಮ್ಮ ಸರಕಾರವು ಪ್ರತಿಯೊಬ್ಬರ ಅರ್ಜಿಗಳನ್ನು ಗಂಭೀರವಾಗಿ ಪರಿಶೀಲಿಸಲಿದೆ. ಯಾವುದೇ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಅದನ್ನು ಫಾಲೋಆಪ್ ಮಾಡುವುದರೊಂದಿಗೆ, ಈ ಬಗ್ಗೆ ತೆಗೆದುಕೊಂಡ ಪರಿಹಾರವನ್ನು ಜನರಿಗೆ ತಿಳಿಸಲಿದ್ದಾರೆ ಎಂದರು. ವ್ಯವಸ್ಥಿತ ರೀತಿಯಲ್ಲಿ ಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು, ಅರ್ಜಿಯ ಸ್ಥಿತಿಗತಿಗಳ ಬಗ್ಗೆ ತಿಳಿಸುವ ಕೆಲಸ ಮಾಡುತ್ತಿರುವುದು ನಮ್ಮ ಸರಕಾರದ ಜವಾಬ್ದಾರಿಯುತ ನಡವಳಿಕೆಯನ್ನು ತೋರಿಸುತ್ತಿದೆ ಎಂದ ಅವರು ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡಲು, ಅವರ ಕಷ್ಟ ಕಡಿಮೆ ಮಾಡಲು ಈ ಸಭೆಯು ಪ್ರಯೋಜನಕಾರಿಯಾಗಲಿದೆ ಎಂದರು.
ಉಡುಪಿ ಪ್ರಜ್ಞಾವಂತರ ಜಿಲ್ಲೆ ಎಂದು ಹೆಸರು ಪಡೆದಿದೆ. ಜಿಲ್ಲೆಯಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಿರುವುದು ಸಂತಸದ ವಿಷಯ ಎಂದ ಅವರು, ಕರಾವಳಿ ಭಾಗದ ಅಭಿವೃದ್ಧಿಯ ಉದ್ದೇಶದಿಂದ ಇದೇ 18 ರಂದು ಮಂಗಳೂರಿನಲ್ಲಿ ವಿಶೇಷ ಸಂಪುಟ ಸಭೆ ನಡೆಯಲಿದೆ. ಈ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ, ವ್ಯವಹಾರ ಕ್ಷೇತ್ರ, ಉದ್ಯೋಗಾವಕಾಶ ಸೇರಿದಂತೆ ಒಟ್ಟಾರೆಯಾಗಿ ಕರಾವಳಿ ಭಾಗದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಖಾತೆ ಪೋಡಿ, ದರಕಾಸ್ತು ಜಮೀನು, ಜಮೀನುಗಳಿಗೆ ಕಾಲುದಾರಿ, ಮನೆ, ನಿವೇಶನ, ಚರಂಡಿ ವ್ಯವಸ್ಥೆ ಮಾಡಿ ಕೊಡುವುದು, ಕೆರೆಗಳ ಅಭಿವೃದ್ಧಿ ಕಾರ್ಯ, ಗೃಹಜ್ಯೋತಿ, ಮುಂತಾದ ಸಮಸ್ಯೆಗಳ ಕುರಿತು ವಿವಿಧ ಇಲಾಖೆಗಳಿಂದ 208 ಅರ್ಜಿಗಳು ಸಲ್ಲಿಕೆಯಾಗಿದ್ದು, ಸಚಿವರು ಶಾಂತವಾಗಿ ಜನರ ಸಮಸ್ಯೆಗಳನ್ನು ಆಲಿಸಿ, ಇಲಾಖೆಯ ಅಧಿಕಾರಿಗಳು ಕ್ರಮವಹಿಸಿ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಸೂಚನೆ ನೀಡಿದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಾಸ್ತವಿಕವಾಗಿ ಮಾತನಾಡಿದರು. ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಡಿ. ಎಫ್. ಓ ರುಥೇನ್, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
