ಥಾಯ್ಲೆಂಡ್‌ನ ಅಂತಾರಾಷ್ಟ್ರೀಯ ಹೃದ್ರೋಗ ಸಮ್ಮೇಳನಕ್ಕೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ ನೇರ ಪ್ರಸಾರ

0
12

17ನೇ ಸಿಐಎಟಿ ವಾರ್ಷಿಕ ವೈಜ್ಞಾನಿಕ ಸಮ್ಮೇಳನ 2026ರ ವೈಜ್ಞಾನಿಕ ಕಾರ್ಯಕ್ರಮದ ಭಾಗವಾಗಿ ಲೇಸರ್ ಆಂಜಿಯೋಪ್ಲಾಸ್ಟಿ ಪ್ರಕರಣದ ನೇರ ಪ್ರಸಾರ

ಮಣಿಪಾಲ : ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಹೃದ್ರೋಗ ವಿಭಾಗವು ಅಂತಾರಾಷ್ಟ್ರೀಯ ಲೈವ್ ಕೇಸ್ ಟ್ರಾನ್ಸ್‌ಮಿಷನ್ (ಚಿಕಿತ್ಸಾ ಪ್ರಕರಣದ ನೇರ ಪ್ರಸಾರ) ನಡೆಸಿತು. ಆಸ್ಪತ್ರೆಯ ಹೃದ್ರೋಗ ಕ್ಯಾಥ್ ಲ್ಯಾಬ್‌ನಿಂದ ಹೃದಯದ ರಕ್ತನಾಳಕ್ಕೆ ಸಂಬಂಧಿಸಿದ ಚಿಕಿತ್ಸಾ ವಿಧಾನವೊಂದನ್ನು ಥಾಯ್ಲೆಂಡ್‌ನಲ್ಲಿ ನಡೆದ 17ನೇ ಸಿಐಎಟಿ ವಾರ್ಷಿಕ ವೈಜ್ಞಾನಿಕ ಸಮ್ಮೇಳನ 2026ಕ್ಕೆ ನೇರವಾಗಿ ಪ್ರಸಾರ ಮಾಡಲಾಯಿತು. ಆಗ್ನೇಯ ಏಷ್ಯಾದ ಹೃದ್ರೋಗ ತಜ್ಞರಿಗಾಗಿ ಆಯೋಜಿಸಲಾಗಿದ್ದ ಸಮ್ಮೇಳನದ ವೈಜ್ಞಾನಿಕ ಕಾರ್ಯಕ್ರಮದ ಭಾಗವಾಗಿ ಈ ಪ್ರಸಾರ ನಡೆಯಿತು.

ಲೈವ್ ಕೇಸ್ ಟ್ರಾನ್ಸ್‌ಮಿಷನ್ ಹೃದ್ರೋಗ ಸಮ್ಮೇಳನಗಳಲ್ಲಿ ಬಳಸಲಾಗುವ ಒಂದು ಬೋಧನಾ ವಿಧಾನವಾಗಿದೆ. ಇದರ ಮೂಲಕ ವೈದ್ಯರು ಚಿಕಿತ್ಸಾ ವಿಧಾನವನ್ನು ಅದು ನಡೆಯುತ್ತಿರುವಾಗಲೇ ವೀಕ್ಷಿಸಿ, ಚಿಕಿತ್ಸಾ ತಂಡದ ಯೋಜನೆ ಮತ್ತು ತಂತ್ರವನ್ನು ಕಲಿಯಬಹುದು.

ಹೃದಯದ ಒಂದಕ್ಕಿಂತ ಹೆಚ್ಚು ರಕ್ತನಾಳಗಳಲ್ಲಿ ಅಡಚಣೆ (ಬ್ಲಾಕ್) ಇದ್ದ ರೋಗಿಯೊಬ್ಬರಿಗೆ ನಡೆಸಿದ ಲೇಸರ್ ಆಂಜಿಯೋಪ್ಲಾಸ್ಟಿ ಈ ಪ್ರಕರಣವಾಗಿತ್ತು. ಸಂಕೀರ್ಣ ಹೃದಯ ರಕ್ತನಾಳ ಕಾಯಿಲೆ ಇರುವ ಆಯ್ದ ರೋಗಿಗಳಿಗೆ ಇಂಟ್ರಾಕೊರೊನರಿ ಇಮೇಜಿಂಗ್ ಜೊತೆಗೆ ಲೇಸರ್ ಆಂಜಿಯೋಪ್ಲಾಸ್ಟಿಯನ್ನು ಹೇಗೆ ಪರಿಗಣಿಸಬಹುದು ಎಂಬುದನ್ನು ಈ ಅವಧಿಯಲ್ಲಿ ಚರ್ಚಿಸಲಾಯಿತು. ಪ್ರತಿಯೊಬ್ಬ ರೋಗಿಗೆ ಯಾವ ಚಿಕಿತ್ಸೆ ಸೂಕ್ತ ಎಂಬುದನ್ನು ಚಿಕಿತ್ಸೆ ನೀಡುವ ಹೃದ್ರೋಗ ತಂಡವು ವಿವರವಾದ ತಪಾಸಣೆಯ ನಂತರ ನಿರ್ಧರಿಸುತ್ತದೆ.

ಹೃದ್ರೋಗ ವಿಭಾಗದ ಘಟಕ ಮುಖ್ಯಸ್ಥರಾದ ಪ್ರೊ. ಟಾಮ್ ದೇವಾಸಿಯಾ ಅವರು ಡಾ. ಮೋನಿಕಾ ಜೆ ಮತ್ತು ಡಾ. ಶಾರ್ದೂಲ್ ದೇಶಮುಖ್ ಅವರೊಂದಿಗೆ ಈ ಚಿಕಿತ್ಸಾ ವಿಧಾನವನ್ನು ನಡೆಸಿದರು. ಚಿಕಿತ್ಸೆಯ ಪ್ರತಿ ಹಂತದಲ್ಲಿ ಲೇಸರ್ ತಂತ್ರಜ್ಞಾನ ಮತ್ತು ಇಂಟ್ರಾಕೊರೊನರಿ ಇಮೇಜಿಂಗ್ ಬಳಕೆಯನ್ನು ತಂಡವು ಸಮ್ಮೇಳನದ ಪ್ರತಿನಿಧಿಗಳಿಗೆ ವಿವರಿಸಿತು. ರೋಗಿಯ ಗೌಪ್ಯತೆಯನ್ನು ಕಾಪಾಡುವ ಉದ್ದೇಶದಿಂದ, ರೋಗಿಯನ್ನು ಗುರುತಿಸಬಹುದಾದ ಯಾವುದೇ ವಿವರಗಳನ್ನು ಈ ಪ್ರಕಟಣೆಯಲ್ಲಿ ನೀಡಲಾಗಿಲ್ಲ.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ಅವರು ಮಾತನಾಡಿ, “ಕ್ಯಾಥ್ ಲ್ಯಾಬ್ ಮತ್ತು ಕ್ಲಿನಿಕಲ್ ತಂಡಗಳ ಬೆಂಬಲದೊಂದಿಗೆ ನಮ್ಮಲ್ಲಿ ಸಮರ್ಪಿತ ಇಂಟರ್ವೆನ್ಷನಲ್ ಹೃದ್ರೋಗ ತಜ್ಞರ ತಂಡವಿದೆ. ಇಂತಹ ಅಂತಾರಾಷ್ಟ್ರೀಯ ವೈಜ್ಞಾನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ನಮ್ಮ ತಂಡಕ್ಕೆ ತನ್ನ ಅನುಭವವನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ಮತ್ತು ಅವರಿಂದ ಕಲಿಯಲು ಅವಕಾಶ ದೊರೆಯುತ್ತದೆ” ಎಂದು ಹೇಳಿದರು.

ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಡಾ. ಸುಧಾಕರ್ ಕಂಟಿಪುಡಿ ಅವರು, “ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಲೇಸರ್ ಆಂಜಿಯೋಪ್ಲಾಸ್ಟಿ ವ್ಯವಸ್ಥೆ ಮತ್ತು ಇಂಟ್ರಾಕೊರೊನರಿ ಇಮೇಜಿಂಗ್ ಸೌಲಭ್ಯಗಳಿವೆ. ಈ ಸೌಲಭ್ಯಗಳಿಂದಾಗಿ ಸಂಕೀರ್ಣ ಹೃದಯ ರಕ್ತನಾಳ ಚಿಕಿತ್ಸಾ ವಿಧಾನಗಳು ಈ ಭಾಗದ ರೋಗಿಗಳಿಗೆ ಲಭ್ಯವಿವೆ” ಎಂದು ತಿಳಿಸಿದರು.

ಹೃದ್ರೋಗ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಇಂಟರ್ವೆನ್ಷನಲ್ ಚಿಕಿತ್ಸಾ ತಂತ್ರಗಳನ್ನು ಈ ಪ್ರದೇಶದ ಹೃದ್ರೋಗ ತಜ್ಞರೊಂದಿಗೆ ಹಂಚಿಕೊಳ್ಳುವಲ್ಲಿ ಆಸ್ಪತ್ರೆ ನಿರಂತರವಾಗಿ ತೊಡಗಿಸಿಕೊಂಡಿದ್ದು, ಈ ಕಾರ್ಯಕ್ರಮ ಅದರ ಭಾಗವಾಗಿದೆ.