ನ. 20ರಂದು ತುಳುನಾಡಿನಾದ್ಯಂತ ‘ಬೆಲ್ಲದಗಟ್ಟಿ’ ತುಳು ಸಿನಿಮಾ ತೆರೆಗೆ

0
20

ಉಡುಪಿ : ತುಳುನಾಡಿನ ಸಂಸ್ಕೃತಿ, ಪರಂಪರೆ, ದೈವಾರಾಧನೆ ಹಾಗೂ ಕೃಷಿ ಪ್ರಧಾನ ಕುಟುಂಬದ ಬದುಕಿನ ಕಥಾಹಂದರ ಹೊಂದಿರುವ ‘ಬೆಲ್ಲದಗಟ್ಟಿ’ ತುಳು ಚಲನಚಿತ್ರ ನವೆಂಬರ್ 20ರಂದು ತುಳುನಾಡಿನಾದ್ಯಂತ ತೆರೆಕಾಣಲಿದೆ.

ಉದಯೋನ್ಮುಖ ನಟ ಹಾಗೂ ನಿರ್ದೇಶಕ ರಾಜಾ ಕಟಪಾಡಿ ಅವರ ಸಾರಥ್ಯದಲ್ಲಿ ಕಟೀಲ್ ಪ್ರಸಾದ್ ಪ್ರೊಡಕ್ಷನ್ಸ್ ಕಟಪಾಡಿ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ನಿರ್ಮಾಪಕರಾಗಿ ರಾಮಕೃಷ್ಣ ಸುಜೀರ್ ಬಾರ್ದಿಲಾ ಬಂಡವಾಳ ಹೂಡಿದ್ದಾರೆ. ಜಗತ್ ರಾಜಪಾಲ್ ಬಿಕರ್ಣಕಟ್ಟೆ ಅವರ ಪ್ರೇರಣೆಯಿಂದ ಚಿತ್ರ ನಿರ್ಮಾಣಗೊಂಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ‌ ಮಾಹಿತಿ ನೀಡಿದ ನಿರ್ದೇಶಕ ರಾಜಾ ಕಟಪಾಡಿ ಅವರು, ಕೃಷಿ ಪ್ರಧಾನ ಕುಟುಂಬವೊಂದರ ಸಾಂಸಾರಿಕ ಜೀವನದ ಹಿನ್ನೆಲೆಯಲ್ಲಿ ಚಿತ್ರ ಮೂಡಿಬಂದಿದೆ. ಹಿರಿಯರ ಆಚರಣೆಗಳು, ಕೃಷಿ ಚಟುವಟಿಕೆಗಳು, ದೈವಾರಾಧನೆ, ಧಾರ್ಮಿಕ ಹಾಗೂ ಜಾನಪದ ಸಂಪ್ರದಾಯಗಳು, ಕಟ್ಟುಪಾಡುಗಳು ಮತ್ತು ಶ್ರಮದಾಯಕ ಜೀವನಪದ್ಧತಿಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ತಪ್ಪು ಕಲ್ಪನೆಯಿಂದ ದೈವದ ಮುಂದೆ ಮಾಡುವ ಪ್ರಮಾಣವೊಂದು ಕುಟುಂಬದಲ್ಲಿ ಸೃಷ್ಟಿಸುವ ಘಟನೆಗಳು, ಅದರ ಪರಿಣಾಮಗಳು ಹಾಗೂ ತಪ್ಪಿನ ಅರಿವಿನೊಂದಿಗೆ ತಪ್ಪು-ಸರಿಗಳ ನಡುವೆ ನಡೆಯುವ ಸಂಘರ್ಷ ಚಿತ್ರದ ಪ್ರಮುಖ ಕಥಾವಸ್ತುವಾಗಿದೆ.

ಈಗಾಗಲೇ ವಿದೇಶಗಳಲ್ಲಿ ಪ್ರೀಮಿಯರ್ ಪ್ರದರ್ಶನ ಕಂಡಿರುವ ಚಿತ್ರ ಅಲ್ಲಿನ ತುಳು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಉಡುಪಿ, ಮಣಿಪಾಲ ಹಾಗೂ ಮಂಗಳೂರಿನಲ್ಲಿಯೂ ಪ್ರೀಮಿಯರ್ ಪ್ರದರ್ಶನಗಳು ನಡೆದಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಮ್ಮದೇ ನಾಟಕ ತಂಡಗಳ ಕಲಾವಿದರಿಗೆ ಚಲನಚಿತ್ರ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಚಿತ್ರ ನಿರ್ಮಿಸಲಾಗಿದೆ ಎಂದರು. ಪ್ರಜ್ವಲ್ ಸುವರ್ಣ ಛಾಯಾಗ್ರಹಣ ಮತ್ತು ಸಂಕಲನ ನಿರ್ವಹಿಸಿದ್ದು, ಸಂದೇಶ್ ಬಾಬಣ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಮನ್ರಿ ರೈ ಪುತ್ತೂರು ಹಾಗೂ ಕೆ.ಪಿ. ಮಿಲನ್ ಹಿನ್ನೆಲೆ ಗಾಯನ ನೀಡಿದ್ದಾರೆ. ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನಿಂದ ಯು/ಎ ಪ್ರಮಾಣಪತ್ರ ದೊರೆತಿದೆ.

ಚಿತ್ರದ ಉದ್ಘಾಟನಾ ಪ್ರದರ್ಶನ ನವೆಂಬರ್ 20ರಂದು ಬೆಳಿಗ್ಗೆ 9.30ಕ್ಕೆ ಉಡುಪಿಯ ಟೈಮ್ಸ್ ಸ್ಕ್ವೇರ್ ಮಾಲ್‌ನ ಭಾರತ್ ಸಿನಿಮಾ ಥಿಯೇಟರ್‌ನಲ್ಲಿ ನಡೆಯಲಿದೆ.