ಮಂಗಳೂರು : 1928ರಲ್ಲಿ ಉಡುಪಿಯಲ್ಲಿ ಆರಂಭಗೊಂಡು ಐತಿಹಾಸಿಕ ಶತಮಾನೋತ್ಸವದತ್ತ ಹೆಜ್ಜೆ ಇಡುತ್ತಿರುವ ‘ತುಳುವ ಮಹಾಸಭೆ’ಯ ವಿಸ್ತರಣೆಯ ಭಾಗವಾಗಿ, ಮಂಗಳೂರು ವಲಯ ಸಮಿತಿ ರೂಪೀಕರಣದ ಮಹತ್ವದ ಸಭೆಯು ಮುಂಬರುವ ಸೆಪ್ಟೆಂಬರ್ 3ರಂದು ಮಂಗಳೂರಿನಲ್ಲಿ ಆಯೋಜನೆಗೊಂಡಿದೆ.
ಎಸ್.ಯು. ಪಣಿಯಾಡಿ ಅವರ ಕಾರ್ಯದರ್ಶಿತ್ವ ಹಾಗೂ ಅಂಜಾರು ರಾಮಣ್ಣ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ 1928ರಲ್ಲಿ ಸ್ಥಾಪನೆಗೊಂಡ ತುಳುವ ಮಹಾಸಭೆಯು 2028ಕ್ಕೆ ತನ್ನ 100ನೇ ವರ್ಷದ ಶತಮಾನೋತ್ಸವವನ್ನು ಆಚರಿಸಲಿದೆ.
ಈ ಐತಿಹಾಸಿಕ ಸಂದರ್ಭದಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಉದ್ದೇಶದಿಂದ ‘ತುಳುವ ಮಹಾಸಭೆ ಇಂಟರ್ನ್ಯಾಷನಲ್’ ಸಂಘಟನೆಯನ್ನು ರೂಪಿಸಲಾಗಿದ್ದು, ಇದರಡಿ ಮಂಗಳೂರು ವಲಯ ಸಮಿತಿ ರಚನೆಗೆ ಸಿದ್ಧತೆ ನಡೆದಿದೆ.
ಈ ಕುರಿತಂತೆ ಸೆಪ್ಟೆಂಬರ್ 3, 2026ರಂದು ಸಂಜೆ 3:30 ಗಂಟೆಗೆ ಮಂಗಳೂರಿನ ಉರ್ವ ಸ್ಟೋರ್ (ಪೊಲೀಸ್ ಸ್ಟೇಷನ್ ಹತ್ತಿರ) ಬಳಿ ಇರುವ ಮಂಗಳೂರು ತಾಲೂಕು ಮಹಿಳಾ ಮಂಡಳಗಳ ಒಕ್ಕೂಟದ ಸಭಾಂಗಣದಲ್ಲಿ ಸಮಿತಿ ರಚನಾ ಸಭೆ ನಡೆಯಲಿದೆ.
“ನೂರು ವರ್ಷಗಳ ಪರಂಪರೆ – ಮುಂದಿನ ಶತಮಾನಕ್ಕೆ ಹೊಸ ಸಂಕಲ್ಪ” ಎಂಬ ಧ್ಯೇಯವಾಕ್ಯದೊಂದಿಗೆ ಈ ಸಭೆ ನಡೆಯಲಿದೆ. ಮಂಗಳೂರು ವಲಯದ ಸಮಸ್ತ ತುಳು ಬಂಧುಗಳು, ತುಳು ಭಾಷೆ-ಸಂಸ್ಕೃತಿಯ ಅಭಿಮಾನಿಗಳು, ಯುವಕರು, ಮಹಿಳೆಯರು ಹಾಗೂ ಸಮಾಜಮುಖಿ ಕಾರ್ಯಕರ್ತರು ಈ ಮಹತ್ವದ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತುಳುವಿನ ಭವಿಷ್ಯದ ಸಂಕಲ್ಪಕ್ಕೆ ಸಹಕಾರ ನೀಡಬೇಕಾಗಿ ತುಳುವರ್ಲ್ಡ್ ಫೌಂಡೇಶನ್‌ನ ಸಂಚಾಲಕರಾದ ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ ಮತ್ತು ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಅವರು ಆಹ್ವಾನಿಸಿದ್ದಾರೆ.
-ಮಂದಾರ ರಾಜೇಶ್

