
ಶ್ರೀ ಕ್ಷೇತ್ರ ಹಿರಿಯಡ್ಕ ನವರಾತ್ರಿಯ ಪೌಂಜು ಉತ್ಸವ ಮೆರವಣಿಗೆಯಲ್ಲಿ ದ್ವೇಷದ ನಡುವೆ ಪ್ರೀತಿಯ ಬೆಳಕು ಚೆಲ್ಲಿದ ಗಾಂಧಿ ಬಳಗ ಹಿರಿಯಡ್ಕದ ವಿಶಿಷ್ಟ ಟ್ಯಾಬ್ಲೊ
“ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯೋಣ” ಸಂದೇಶಕ್ಕೆ ಜನರಿಂದ ಬಾರಿ ಸ್ಪಂದನೆ
ಹಿರಿಯಡ್ಕ : ಶ್ರೀ ಕ್ಷೇತ್ರ ಹಿರಿಯಡ್ಕದಲ್ಲಿ ವಿಜೃಂಭಣೆಯಿಂದ ನಡೆದ ನವರಾತ್ರಿ ಪೌಂಜು ಉತ್ಸವದ ಅದ್ದೂರಿ ಮೆರವಣಿಗೆಯಲ್ಲಿ ಗಾಂಧಿ ಬಳಗ ಹಿರಿಯಡ್ಕದ ನೇತೃತ್ವದಲ್ಲಿ ಮೂಡಿಬಂದ ವಿಶೇಷ ಅಲಂಕೃತ ಟ್ಯಾಬ್ಲೊ ಸಾವಿರಾರು ಭಕ್ತರು ಹಾಗೂ ನಾಗರಿಕರ ಗಮನ ಸೆಳೆಯಿತು. ಕಲಾತ್ಮಕ ವಿನ್ಯಾಸದೊಂದಿಗೆ ಪ್ರೀತಿ, ಶಾಂತಿ ಮತ್ತು ಸಹಬಾಳ್ವೆಯ ಸಂದೇಶ ಸಾರಿದ ಈ ಟ್ಯಾಬ್ಲೊ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿತು.
ಏಳು ಶುಭ್ರ ಬಿಳಿ ಅಶ್ವಗಳು ಎಳೆಯುತ್ತಿರುವ ಭವ್ಯ ರಥ, ನವಿಲುಗಳ ಆಕರ್ಷಕ ವಿನ್ಯಾಸ ಹಾಗೂ ಬೆಳ್ಳಿ ಲೇಪಿತ ಕುಸುರಿ ಕೆಲಸಗಳಿಂದ ಅಲಂಕೃತಗೊಂಡಿತ್ತು. ರಥದಲ್ಲಿ ತ್ರಿಶೂಲ ಮತ್ತು ಡಮರುಗವನ್ನು ಹಿಡಿದು ಆಶೀರ್ವದಿಸುವ ಭಂಗಿಯಲ್ಲಿ ವಿರಾಜಮಾನನಾಗಿದ್ದ ಪರಶಿವನ ದಿವ್ಯ ಮೂರ್ತಿ ಭಕ್ತರಲ್ಲಿ ಭಕ್ತಿಭಾವವನ್ನು ಮೂಡಿಸಿತು. ಋಷಿಮುನಿಯೊಬ್ಬರು ಶಿವನನ್ನು ಆರಾಧಿಸುವ ದೃಶ್ಯವೂ ಟ್ಯಾಬ್ಲೊದ ಸೌಂದರ್ಯವನ್ನು ಹೆಚ್ಚಿಸಿತು.

ರಥದ ಮುಂಭಾಗದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮುಗುಳ್ನಗುವಿನ ಭಾವಚಿತ್ರದೊಂದಿಗೆ “ಗಾಂಧಿ ಬಳಗ ಹಿರಿಯಡ್ಕ – ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯೋಣ” ಎಂಬ ಸಂದೇಶವನ್ನು ಪ್ರದರ್ಶಿಸಲಾಗಿತ್ತು. ಸಮಾಜದಲ್ಲಿ ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವದ ಅಗತ್ಯವನ್ನು ಸಾರಿದ ಈ ಸಂದೇಶ ಜನರ ಮನಸ್ಸನ್ನು ಆಳವಾಗಿ ತಟ್ಟಿತು.
ಪ್ರೀತಿ, ಶಾಂತಿ ಮತ್ತು ಸಹಬಾಳ್ವೆಯ ಸಂದೇಶ
ಇಂದಿನ ಸಮಾಜದಲ್ಲಿ ಜಾತಿ-ಧರ್ಮದ ಹೆಸರಿನಲ್ಲಿ ಉಂಟಾಗುವ ಸಂಘರ್ಷಗಳು, ದ್ವೇಷ ಹಾಗೂ ಹಿಂಸಾಚಾರದ ಘಟನೆಗಳ ನಡುವೆ ಪ್ರೀತಿ, ವಿಶ್ವಾಸ, ಶಾಂತಿ ಮತ್ತು ಸಹಬಾಳ್ವೆಯ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಗಾಂಧಿ ಬಳಗ ಹಿರಿಯಡ್ಕ ಈ ವಿನೂತನ ಪರಿಕಲ್ಪನೆಯನ್ನು ರೂಪಿಸಿತ್ತು. ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಪ್ರೀತಿಯ ತತ್ವಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಇದಾಗಿತ್ತು.
ಸೆಲ್ಫಿ, ಫೋಟೋಗಳ ಮೂಲಕ ಸಂದೇಶಕ್ಕೆ ಮತ್ತಷ್ಟು ಪ್ರಚಾರ
ಮೆರವಣಿಗೆಯಲ್ಲಿ ಟ್ಯಾಬ್ಲೊ ಸಾಗುತ್ತಿದ್ದಂತೆ ಹಿರಿಯರು, ಯುವಕರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಅನೇಕರು ಸಂದೇಶ ಫಲಕದ ಮುಂದೆ ನಿಂತು ಸೆಲ್ಫಿ ಮತ್ತು ಫೋಟೋಗಳನ್ನು ತೆಗೆದುಕೊಂಡರು. ಬಳಿಕ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ಮತ್ತಷ್ಟು ಜನರಿಗೆ ತಲುಪಿಸಿದರು. ಟ್ಯಾಬ್ಲೊಗೆ ದೊರೆತ ಈ ಜನಮೆಚ್ಚುಗೆ ಗಾಂಧಿ ಬಳಗದ ಸದಸ್ಯರಲ್ಲಿ ಸಂತಸ ಮೂಡಿಸಿತು.
ಈ ಕುರಿತು ಮಾತನಾಡಿದ ಗಾಂಧಿ ಬಳಗದ ಪ್ರಮುಖರು, “ಜನರಿಂದ ದೊರೆತ ಪ್ರೀತಿ ಮತ್ತು ಮೆಚ್ಚುಗೆಯೇ ನಮಗೆ ಸಿಕ್ಕ ಅತಿದೊಡ್ಡ ಪ್ರಶಸ್ತಿ. ಸಮಾಜಕ್ಕೆ ಇಂದಿಗೂ ದ್ವೇಷ ಮತ್ತು ಹಿಂಸೆಗಿಂತ ಪ್ರೀತಿ, ಶಾಂತಿ ಹಾಗೂ ಸಹಬಾಳ್ವೆಯೇ ಹೆಚ್ಚು ಅಗತ್ಯವಿದೆ. ಟ್ಯಾಬ್ಲೊದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕೆಂಬ ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿರುವುದು ಹೆಮ್ಮೆಯ ಸಂಗತಿ” ಎಂದು ಸಂತಸ ವ್ಯಕ್ತಪಡಿಸಿದರು.
ರಾತ್ರಿ ಬೆಳಕಿನ ಅಲಂಕಾರದಲ್ಲಿ ಕಂಗೊಳಿಸಿದ ರಥ
ಗೋಲ್ಡನ್ ಲೈಟಿಂಗ್ಸ್, ಫಾಗ್ ಎಫೆಕ್ಟ್ ಹಾಗೂ ಹೂವಿನ ಅಲಂಕಾರಗಳಿಂದ ಟ್ಯಾಬ್ಲೊ ರಾತ್ರಿ ವೇಳೆ ಮತ್ತಷ್ಟು ಆಕರ್ಷಕವಾಗಿ ಕಂಗೊಳಿಸಿತು. ದೇವರ ರಥದ ಭವ್ಯತೆ ಹಾಗೂ ಗಾಂಧೀಜಿಯವರ ಮಾನವೀಯ ತತ್ವಗಳ ಸಮನ್ವಯ ಈ ಟ್ಯಾಬ್ಲೊಗೆ ವಿಶೇಷ ಮೆರುಗು ನೀಡಿತು.
ಈ ಟ್ಯಾಬ್ಲೊದ ನಿರ್ಮಾಣ ಮತ್ತು ಮೆರವಣಿಗೆಯ ಯಶಸ್ಸಿಗಾಗಿ ಗಾಂಧಿ ಬಳಗ ಹಿರಿಯಡ್ಕದ ಎಲ್ಲ ಸದಸ್ಯರು ತನು, ಮನ ಹಾಗೂ ಧನದ ಮೂಲಕ ಶ್ರಮಿಸಿದ್ದಾರೆ. ಧಾರ್ಮಿಕ ಉತ್ಸವದ ಸಂಭ್ರಮದೊಂದಿಗೆ ಮಾನವೀಯ ಮೌಲ್ಯಗಳನ್ನು ಸಾರಿದ ಈ ಪ್ರಯತ್ನವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
