ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ‘ಹಿರಿಯ ಕವಿ ಮನೆ ಭೇಟಿ’ ಸರಣಿ ಕಾರ್ಯಕ್ರಮದನ್ವಯ ಈ ಬಾರಿ ಕನ್ನಡದ ದೈನಿಕಗಳಾದ ನವ ಭಾರತ, ಉದಯವಾಣಿ, ಹೊಸದಿಗಂತ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಕನ್ನಡ, ತುಳು ಸಾಹಿತಿ ರತ್ನ ಕುಮಾರ್ ಎಂ. ಅವರ ಮನೆಗೆ ಭೇಟಿ ನೀಡಿ ಅವರನ್ನು ಹಾರ, ಶಾಲು, ಪೇಟ, ಶ್ರೀಫಲಾದಿಗಳನ್ನು ಸಮರ್ಪಿಸಿ, ಸನ್ಮಾನಿಸಿ, ಪುಸ್ತಕ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಘಟಕದ ಅಧ್ಯಕ್ಷ ಡಾ.ಮಂಜುನಾಥ್ ಎಸ್. ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ರತ್ನಾವತಿ ಜೆ. ಬೈಕಾಡಿಯವರು ಪ್ರಾರ್ಥಿಸಿದರು. ಕ. ಸಾ. ಪ. ಕೇಂದ್ರ ಮಾರ್ಗದರ್ಶನ ಸಮಿತಿ ಸದಸ್ಯ ಡಾ. ಮುರಲೀ ಮೋಹನ್ ಚೂಂತಾರ್ ಪ್ರಸ್ತಾವಿಸಿ ಸ್ವಾಗತಿಸಿದರು.
ಗೌರವ ಕಾರ್ಯದರ್ಶಿ ಗಣೇಶ ಪ್ರಸಾದಜೀ ರತ್ನ ಕುಮಾರ್ ರ ಬದುಕು ಬರಹಗಳ ಪರಿಚಯ ಮಾಡಿ ಕೊಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರತ್ನ ಕುಮಾರರು, ತಾನು ಬೆಳೆದು ಬಂದ ಹಾದಿಯನ್ನು ಹಂಚಿಕೊಂಡು ” ಭಾಷೆ, ಸಂಸ್ಕೃತಿ ಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಸಾಹಿತಿಗಳಂತೂ ಹೊಸ ದೃಷ್ಟಿ, ಹೊಸ ಸೃಷ್ಟಿ ಯೊಂದಿಗೆ ಹೊಸ ಕೊಡುಗೆಗಳನ್ನು ನೀಡುತ್ತಲೇ ಇರಬೇಕು. ಹಿರಿಯ ಕವಿಗಳನ್ನು ಮನೆಗೇ ಬಂದು ಆತ್ಮೀಯವಾಗಿ ಸನ್ಮಾನಿಸುವ ಪರಿಷತ್ತಿನ ಕಾರ್ಯಕ್ರಮ ಅಭಿನಂದನೀಯ ” ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪರಿಷತ್ತಿನ ಮಹಿಳಾ ಪ್ರತಿನಿಧಿ ಡಾ.ಮೀನಾಕ್ಷಿ ರಾಮಚಂದ್ರ, ಜಿಲ್ಲಾ ಪ್ರತಿನಿಧಿ ಸನತ್ ಕುಮಾರ್ ಜೈನ್, ರತ್ನ ಕುಮಾರ್ ರ ಪತ್ನಿ ಎಂ. ಎನ್. ಇಂದಿರಾ, ಪುತ್ರ ಅಜಿತ ಕುಮಾರ್, ಸೊಸೆ ಪ್ರದೀಪ್ತಾ ಅಜಿತ್, ಮೊಮ್ಮಕ್ಕಳು ಮತ್ತು ರತ್ನ ಕುಮಾರ್ ರ ಅಭಿಮಾನಿ ವೃಂದದವರು ಉಪಸ್ಥಿತರಿದ್ದರು. ಗೌರವ ಕೋಶಾಧಿಕಾರಿ ಸುಬ್ರಾಯ ಭಟ್ ವಂದಿಸಿದರು.