ಅಮಾಸೆಬೈಲು : ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶೇಡಿಮನೆ ಗ್ರಾಮದ 64 ವರ್ಷದ ಸುರತ್ ಕುಮಾರ್ ಶೆಟ್ಟಿ ಎಂಬವರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಸುರತ್ ಕುಮಾರ್ ಶೆಟ್ಟಿ ಅವರು ಕಳೆದ ಸುಮಾರು ಒಂದು ವರ್ಷದಿಂದ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದ ಬಳಿಕ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ವಾಕಿಂಗ್‌ಗೆ ತೆರಳುತ್ತಿದ್ದರು.
ಅದರಂತೆ ಆಗಸ್ಟ್ 29ರಂದು ಬೆಳಗ್ಗೆ ಸುಮಾರು 7 ಗಂಟೆಗೆ ಎಂದಿನಂತೆ ಶೇಡಿಮನೆ ಗ್ರಾಮದ ಅಗಳಿಬೈಲು ಅರಸಮ್ಮ ಕಾನು ಪ್ರದೇಶದಿಂದ ಅರಸಮ್ಮ ಕಾನು ಪೇಟೆಯವರೆಗೆ ವಾಕಿಂಗ್‌ಗೆ ತೆರಳಿದ್ದರು. ಆದರೆ ವಾಕಿಂಗ್‌ಗೆ ತೆರಳಿದ ಬಳಿಕ ಅವರು ಮನೆಗೆ ಮರಳಿಲ್ಲ.
ಸುರತ್ ಕುಮಾರ್ ಶೆಟ್ಟಿ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಹಾಗೂ ಪರಿಚಯಸ್ಥರು ವಿವಿಧೆಡೆ ಹುಡುಕಾಟ ನಡೆಸಿದ್ದಾರೆ. ಸಂಬಂಧಿಕರು ಹಾಗೂ ಪರಿಚಯಸ್ಥರಲ್ಲಿಯೂ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.
ಈ ಕುರಿತು ಅವರ ಸೋದರ ಮಾವ ಅನೀಶ್ ವಿ. ಶೆಟ್ಟಿ ಅವರು ಅಮಾಸೆಬೈಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅಪರಾಧ ಕ್ರಮಾಂಕ 21/2026ರಂತೆ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಾಪತ್ತೆಯಾಗಿರುವ ಸುರತ್ ಕುಮಾರ್ ಶೆಟ್ಟಿ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ಕುಟುಂಬಸ್ಥರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.

