ಮಂಗಳೂರು ವಿವಿ: ‘ಯಕ್ಷಮಂಗಳ ಪ್ರಶಸ್ತಿ’ ಪ್ರದಾನ

0
83

ವಿದ್ಯಾವಂತರು ಯಕ್ಷಗಾನದ ಪರಂಪರೆ ಉಳಿಸಬೇಕು ಯಕ್ಷಮಂಗಳ ಪ್ರಶಸ್ತಿ‌ಪ್ರದಾನ ಸಮಾರಂಭದಲ್ಲಿ ತಲ್ಲೂರು ಶಿವರಾಮ ಶೆಟ್ಟಿ

ಕೊಣಾಜೆ: ಯಕ್ಷಗಾನ ಕಲೆಗೆ ವಿಶೇಷ ಉತ್ತೇಜನವಿದೆ. ಮೂಡಲಪಾಯ ಕಲೆಗಳು ಹೊಸ ತಲೆಮಾರಿನ ನಿರ್ಲಕ್ಷ್ಯದಿಂದ ಹಿನ್ನಡೆ ಅನುಭವಿಸುತ್ತಿದೆ. ಆದರೆ ಯಕ್ಷಗಾನ ಸುಯೋಗವೆಂದರೆ ಇಂಜಿನಿಯರ್, ಡಾಕ್ಟರ್, ಶಿಕ್ಷಕರು ಮೊದಲಾದ ವಿವಿಧ ಕ್ಷೇತ್ರಗಳ ಆಸಕ್ತರ ಮೂಲಕ ಸಮೃದ್ಧವಾಗಿ ಬೆಳೆಯುತ್ತಿದೆ. ವಿದ್ಯಾವಂತರು ಸೃಜನಶೀಲತೆಗೆ ಒತ್ತು ಕೊಡುವಂತೆ ಪರಂಪರೆಯನ್ನೂ ಉಳಿಸಿಕೊಳ್ಳಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಮಂಗಳೂರು ವಿವಿಯ ಡಾ.ಯು.ಆರ್ ರಾವ್ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಡಾ.ಬನಾರಿ, ಪ್ರೊ.ಸಾಮಗ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರಿಗೆ 2024-25ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಹಾಗೂ ಅಶೋಕ ಹಾಸ್ಯಗಾರ ಅವರ ದಶರೂಪಕಗಳ ದಶಾವತಾರ ಕೃತಿಗೆ ಕೃತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಅಭಿನಂದನ ಭಾಷಣ ಮಾಡಿದ ಪ್ರೊ.ಕೆ ಚಿನ್ನಪ್ಪ ಗೌಡ ಅವರು ಡಾ.ರಮಾನಂದ ಬನಾರಿ ಮತ್ತು ಪ್ರೊ.ಎಂ.ಎಲ್ ಸಾಮಗ ಅವರು ಯಕ್ಷಗಾನದ ಅಧ್ಯಯನ ಮತ್ತು ವಿಸ್ತರಣೆಗೆ ಕೊಡುಗೆ ನೀಡಿದ್ದಾರೆ.‌ ಬಣ್ಣದ ಮಾಲಿಂಗರ ಬಣ್ಣದ ವೇಷದ ಸೌಂದರ್ಯವನ್ನು ವರ್ತಮಾನದಲ್ಲಿ ಸೃಜನಶೀಲತೆಯೊಂದಿಗೆ ತಂದ ಕಲಾವಿದರು ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಎಂದರು. ಅಶೋಕ ಹಾಸ್ಯಗಾರರ ದಶರೂಪಕಗಳ ದಶಾವತಾರ ಕೃತಿ ಯಕ್ಷಗಾನವನ್ನು ಶಾಸ್ತ್ರೀಯ ಚೌಕಟ್ಟಿನಲ್ಲಿ ನೋಡುವ ಪ್ರಯತ್ನ ಎಂದರು
ಮಂಗಳೂರು ವಿವಿ ಕುಲಸಚಿವ ರಾಜು ಮೊಗವೀರ ಮಾತನಾಡಿ ಯಕ್ಷಗಾನ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಪರಿಚಯ ಮಾಡಿಕೊಡಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮಂಗಳೂರು ವಿವಿ ಕುಲಪತಿಗಳಾದ ಪ್ರೊ.ಪಿ.ಎಲ್ ಧರ್ಮ ಮಾತನಾಡಿ ಯಕ್ಷಗಾನ ಕೇಂದ್ರವು ವಿನೂತನ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಎಲ್ಲರನ್ನು ಒಂದುಗೂಡಿಸುವ ಗುಣ ಯಕ್ಷಗಾನ ಕಲೆಗಿದೆ ಎಂದು ಹೇಳಿದರು.

ಯಕ್ಷಗಾನ ಗುರುಗಳಾದ ದೀವಿತ್ ಕೋಟ್ಯಾನ್ ಹಾಗೂ ಯಕ್ಷಮಂಗಳ ವಿದ್ಯಾರ್ಥಿನಿ ಕಾವ್ಯ ಹಂದೆ ಅವರು ಪ್ರಶಸ್ತಿ ಪತ್ರ ವಾಚಿಸಿದರು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರದ ಸಂಶೋಧನಾ ಅಧಿಕಾರಿ ಡಾ.ಸತೀಶ್ ಕೊಣಾಜೆ ವಂದಿಸಿದರು. ಯಕ್ಷಮಂಗಳ ವಿದ್ಯಾರ್ಥಿನಿ ಸಾಯಿಸುಮ ನಾವಡ ನಿರೂಪಿಸಿದರು.

ಯಕ್ಷ ನಿರೂಪಣೆ ಮತ್ತು ಗಣಪತಿ ಕೌತುಕ
ಇಡೀ ಕಾರ್ಯಕ್ರಮವನ್ನು ಕಲಾವಿದೆ ಸಾಯಿಸುಮ ನಾವಡ ಯಕ್ಷಗಾನದ ಅರ್ಥಗಾರಿಕೆ ಶೈಲಿಯಲ್ಲಿ ನಿರೂಪಣೆ ನಡೆಸಿದ್ದು ವಿಶೇಷ ಗಮನ ಸೆಳೆಯಿತು. ಕಾರ್ಯಕ್ರಮದ ಉದ್ದಕ್ಕೂ ನಡುನಡುವೆ ಯಕ್ಷಗಾನದ ಹಾಡುಗಳನ್ನು, ದೀವಿತ್ ಶ್ರೀಧರ ಕೋಟ್ಯಾನ್ ರಚಿಸಿದ‌ ಅಭಿನಂದನಾ ಗೀತೆಯನ್ನು ಗಾಯಕ ಮನ್ವಿತ್ ಇರಾ ಹಾಡಿದರು. ಹಿಮ್ಮೇಳದಲ್ಲಿ ಕೌಶಿಕ್ ಪುತ್ತಿಗೆ, ಸ್ಕಂಧ ಕೊನ್ನಾರ್ ಮತ್ತು ಹರಿಶ್ಚಂದ್ರ ನಾಯ್ಗ ಸಹಕರಿಸಿದ್ದರು.
ಯಕ್ಷಮಂಗಳ ತಂಡಗಳಾದ ವಿದ್ಯಾರ್ಥಿಗಳಾದ ಶ್ರೇಯಸ್, ಮಹೇಶ್ ಶೆಟ್ಟಿ, ಸುವರ್ಣ ಅವರಿಂದ ಪೂರ್ವರಂಗದ ಭಾಗವಾದ ಗಣಪತಿ ಕೌತುಕ ಪ್ರಸ್ತುತಪಡಿಸಲಾಯಿತು.

ಕಾಸರಗೋಡಿಗೆ ಪ್ರತಿನಿಧ್ಯ ಸಿಗಲಿ : ಬನಾರಿ
ಯಕ್ಷಮಂಗಳ ಪ್ರಶಸ್ತಿ‌ ಸ್ವೀಕರಿಸಿ ಮಾತನಾಡಿದ‌ ಡಾ. ರಮಾನಂದ ಬನಾರಿ ಕಾಸರಗೋಡಿನ ಮಣ್ಣು ಅಚ್ಚಗನ್ನಡದ ನೆಲ. ಅಲ್ಲಿಂದ ನನ್ನನ್ನು ಪ್ರಶಸ್ತಿಗೆ ಗುರುತಿಸಿದ್ದು ಕಾಸರಗೋಡಿಗೆ ಸಂದ ಗೌರವ. ಕರ್ನಾಟಕದ ಅಕಾಡೆಮಿಗಳಿಗೆ, ಇತರೆ ಪ್ರಶಸ್ತಿಗಳಿಗೆ ಕಾಸರಗೋಡಿಗೆ ಪ್ರಾತಿನಿಧ್ಯ ಸಿಗಬೇಕು ಅಂದರು. ಡಾ.ಎಂ.ಎಲ್ ಸಾಮಗ ಮತ್ತು ಅಶೋಕ ಹಾಸ್ಯಗಾರರು ಕೃತಜ್ಞತೆ ಸೂಚಿಸಿದರು. ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರು ಅನಾರೋಗ್ಯ ನಿಮಿತ್ತ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ

LEAVE A REPLY

Please enter your comment!
Please enter your name here