ಫ್ರಾನ್ಸ್‌ನ ಕಾನ್ ನಗರದಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ಕಾರ್ಯಕ್ರಮದಲ್ಲಿ ಕರ್ನಾಟಕದ ಮಂಗಳೂರು ಮೂಲದ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಭಾಗವಹಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ವರ್ಲ್ಡ್ ವುಮನ್ ಫೌಂಡೇಶನ್ ಆಯೋಜಿಸಿರುವ ‘ವರ್ಲ್ಡ್ ವುಮನ್ ಕಾನ್ ಅಜೆಂಡಾ 2026’ ಕಾರ್ಯಕ್ರಮಕ್ಕೆ ಕರೆನ್ ಅವರಿಗೆ ಭಾಷಣ ಮಾಡಲು ಆಹ್ವಾನ ಬಂದಿದೆ. ಮೇ 12ರಿಂದ 15ರವರೆಗೆ ನಡೆಯುವ ಈ ಕಾರ್ಯಕ್ರಮವು ಕಾನ್ ಚಿತ್ರೋತ್ಸವ 2026 ಅಂಗವಾಗಿ ನಡೆಯಲಿದೆ.

‘AI, Artistry & Activism’ ಎಂಬ ಮಹತ್ವದ ವಿಷಯದಡಿ ಕರೆನ್ ತಮ್ಮ ಅಧಿವೇಶನದಲ್ಲಿ ಕೃತಕ ಬುದ್ಧಿಮತ್ತೆ, ಕಲಾತ್ಮಕತೆ ಹಾಗೂ ಸಾಮಾಜಿಕ ಜಾಗೃತಿ ಕುರಿತಂತೆ, ವಿಶೇಷವಾಗಿ ಭಾರತದ ಸ್ವತಂತ್ರ ಸಿನೆಮಾ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಕರೆನ್ ನಿರ್ದೇಶನದ ಹಿಂದಿ ಚಲನಚಿತ್ರ ಸೆಪ್ಟೆಂಬರ್ 21 ಕೂಡ ಇದೇ ಸಂದರ್ಭದಲ್ಲಿ ಗಮನ ಸೆಳೆಯುತ್ತಿದೆ. ಈ ಚಿತ್ರವು ಮೇ 16, 2026ರಂದು ಕಾನ್ ಚಿತ್ರೋತ್ಸವದ ಮಾರ್ಕೆ ದು ಫಿಲ್ಮ್ ವಿಭಾಗದಲ್ಲಿ Palais ಥಿಯೇಟರ್‌ನಲ್ಲಿ ವರ್ಲ್ಡ್ ಪ್ರೀಮಿಯರ್ ಮಾರ್ಕೆಟ್ ಸ್ಕ್ರೀನಿಂಗ್ ಕಾಣಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕರೆನ್ ಕ್ಷಿತಿ ಸುವರ್ಣ, “ಕಲೆ ಮತ್ತು ತಂತ್ರಜ್ಞಾನದ ಜಾಗತಿಕ ಚರ್ಚೆಗೆ ಕರ್ನಾಟಕದ ದೃಷ್ಟಿಕೋನವನ್ನು ತರುವ ಅವಕಾಶ ಇದಾಗಿದೆ. ಈ ಗೌರವಕ್ಕಾಗಿ ವರ್ಲ್ಡ್ ವುಮನ್ ಫೌಂಡೇಶನ್‌ಗೆ ನಾನು ಆಭಾರಿ,” ಎಂದು ತಿಳಿಸಿದ್ದಾರೆ.
ಮಂಗಳೂರು ಮೂಲದ ಕರೆನ್ ಕ್ಷಿತಿ ಸುವರ್ಣ ಅವರು ಚಲನಚಿತ್ರ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದು, ‘ಸೆಪ್ಟೆಂಬರ್ 21’ ಅವರ ಚೊಚ್ಚಲ ಹಿಂದಿ ಚಿತ್ರವಾಗಿದೆ.

