ಉಡುಪಿ: ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಆಟೋ ರಿಕ್ಷಾ ಢಿಕ್ಕಿ ಹೊಡೆದು ಅವರು ರಸ್ತೆಗೆ ಎಸೆಯಲ್ಪಟ್ಟ ಕಾರಣ ಮಣಿಪಾಲದಿಂದ ಧರ್ಮಸ್ಥಳದತ್ತ ತೆರಳುತ್ತಿದ್ದ ಖಾಸಗಿ ಬಸ್ ಚಕ್ರದಡಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಈಶ್ವರನಗದಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಉಪ್ಪೂರಿನ ನಿವಾಸಿ ವಿನೋದಾ ಶೇರ್ವೆಗಾರ (೫೯) ಮೃತಪಟ್ಟವರು. ಪತಿ ಮತ್ತು ಪುತ್ರಿಯನ್ನು ಅವರು ಅಗಲಿದ್ದಾರೆ.
ವಿನೋದಾ ಅವರ ಮಗಳು ತನ್ನ ಮಕ್ಕಳು ಮತ್ತೆ ಅತ್ತೆಯೊಂದಿಗೆಈಶ್ವರನಗರದ ಮನೆಯಲ್ಲಿ ನೆಲೆಸಿದ್ದಾರೆ. ಮಗಳು ಬ್ಯಾಂಕ್ ಉದ್ಯೋಗಿಯಾಗಿರುವ ಕಾರಣ ಮತ್ತು ಅವರ ಅತ್ತೆಗೆ ಅನಾರೋಗ್ಯ ಸಮಸ್ಯೆ ಇರುವ ಕಾರಣ ಇಬ್ಬರು ಮೊಮ್ಮಕ್ಕಳ ಜವಾಬ್ದಾರಿಯನ್ನು ಅಜ್ಜಿ ವಿನೋದಾ ಅವರೇ ವಹಿಸಿಕೊಂಡಿದ್ದರು. ಇಬ್ಬರು ಮಕ್ಕಳನ್ನೂ ದಿನನಿತ್ಯ ಬ್ರಹ್ಮಾವರದ ಖಾಸಗಿ ಶಾಲೆಗೆ ಕರೆದುಕೊಂಡು ಹೋಗಿ ಸಂಜೆ ವಾಪಸ್ ಮನೆಗೆ ಬಿಟ್ಟು ಉಳ್ಳೂರಿನ ಮನೆಗೆ ವಾಪಸಾಗುತ್ತಿದ್ದರು. ಎಂದಿನಂತೆ ಬುಧವಾರ ಸಂಜೆ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬಂದು ಮನೆಗೆ ಬಿಟ್ಟು ಉಳ್ಳೂರಿಗೆ ಹೊರಟಿದ್ದರು.
ಬಂದೆರಗಿದ ರಿಕ್ಷಾ, ಬಸ್
ಉಡುಪಿಗೆ ತೆರಳಲೆಂದು ರಸ್ತೆ ದಾಟುತ್ತಿದ್ದ ವಿನೋದಾ ಅವರು ರಸ್ತೆ ದಾಟಿದಾಗ ದೂರದಲ್ಲಿ ಆಗಮಿಸುತ್ತಿದ್ದ ಆಟೋ ರಿಕ್ಷಾವನ್ನು ಕಂಡು ಅಲ್ಲಿಯೇ ನಿಂತಿದ್ದರು. ನೋಡುತ್ತಿದ್ದಂತೆ ಅದೇ ರಿಕ್ಷಾ ಅವರಿಗೆ ಢಿಕ್ಕಿ ಹೊಡೆದಿದ್ದು, ಅವರು ರಸ್ತೆಗೆ ಬಿದ್ದರು. ರಿಕ್ಷಾದ ಹಿಂದಿನಿಂದ ರಸ್ತೆಯ ಬಲಬದಿಯಲ್ಲಿ ಅತೀ ವೇಗದಲ್ಲಿ ಆಗಮಿಸಿದ ಖಾಸಗಿ ಎಕ್ಸ್‌ಪ್ರೆಸ್‌ನ ಚಕ್ರದ ಅಡಿಗೆ ಸಿಲುಕಿದ ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನ ಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಢಿಕ್ಕಿಯ ರಭಸಕ್ಕೆ ಅವರ ದೇಹ ಗುರುತೇ ಸಿಗದನ್ನು ಛಿದ್ರಗೊಂಡಿತ್ತು. ಅನಂತರ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆ್ಯಂಬುಲೆನ್ಸ್ ಮೂಲಕ ಶವಾಗಾರಕ್ಕೆ ತೆಗೆದುಕೊಂಡು ಹೋಗಲು ನೆರವಾದರು.
ವಿನೋದಾ ಅವರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಕಾಲ ನರ್ಸ್ ಆಗಿಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಎಲ್ಲರೊಂದಿಗೂ ಆತ್ಮೀಯವಾಗಿದ್ದ ಅವರ ಒಡನಾಟವನ್ನು ಸಹೋದ್ಯೋಗಿಗಳು ನೆನಪಿಸಿಕೊಳ್ಳುತ್ತಾರೆ. ಈಶ್ವರನಗರದಲ್ಲಿ ದಿನನಿತ್ಯ ನನ್ನೊಂದಿಗೆ ಕುಶಲೋಪರಿ ನಡೆಸುತ್ತಿದ್ದರು. ಅಪಘಾತದಿಂದಾಗಿ ಅವರ ಮುಖವನ್ನೇ ನೋಡಲಾಗದ ಸ್ಥಿತಿ ಎದುರಾಗಿದೆ ಎನ್ನುತ್ತ ಸ್ಥಳೀಯ
ಮಹಿಳೆ ಗೀತಾ ಕಣ್ಣೀರಿಟ್ಟರು. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಿಕ್ಷಾ ಹಾಗೂ ಬಸ್ಸನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.