ಮಣಿಪಾಲ–ಕೊಳಲಗಿರಿ ರಸ್ತೆ ಅವ್ಯವಸ್ಥೆ : ಒಂದೇ ಮಳೆಗೆ ಕೆಸರಿನ ಕಣ, ಅಪಘಾತಗಳ ಸರಣಿ ; ತುರ್ತು ಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಒತ್ತಾಯ..!

0
26

ಉಡುಪಿ: ಉಪ್ಪುರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣಿಪಾಲ–ಕೊಳಲಗಿರಿ ಸಂಪರ್ಕಿಸುವ ಪ್ರಮುಖ ರಸ್ತೆ ಸಂಪೂರ್ಣ ಅವ್ಯವಸ್ಥೆಗೆ ತುತ್ತಾಗಿದ್ದು, ಒಂದೇ ಮಳೆಗೆ ರಸ್ತೆ ಕೆಸರಿನ ಕಣವಾಗಿ ಮಾರ್ಪಟ್ಟಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರರು ಪ್ರತಿನಿತ್ಯ ಜೀವಭಯದಲ್ಲೇ ಸಂಚರಿಸುವಂತಾಗಿದೆ.

ಈ ರಸ್ತೆಯಲ್ಲಿ ಮಳೆ ನೀರು ನಿಂತು ಕೆಸರುಮಯ ವಾತಾವರಣ ನಿರ್ಮಾಣವಾಗಿರುವುದರಿಂದ ಈಗಾಗಲೇ ಹಲವಾರು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಅಪಘಾತಕ್ಕೀಡಾಗಿವೆ. ಕೆಲವು ಪ್ರಕರಣಗಳಲ್ಲಿ ವಾಹನ ಸವಾರರು ಶಾಶ್ವತ ಅಂಗವೈಕಲ್ಯಕ್ಕೂ ಒಳಗಾಗಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ಇನ್ನೊಂದೆಡೆ, ಸಿಮೆಂಟ್ ಮಿಕ್ಸಿಂಗ್ ವಾಹನಗಳು ರಸ್ತೆಯುದ್ದಕ್ಕೂ ಕಾಂಕ್ರೀಟ್ ಹಾಗೂ ಸಿಮೆಂಟ್ ಚೆಲ್ಲುತ್ತಾ ಸಂಚರಿಸುತ್ತಿರುವುದರಿಂದ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಹಲವೆಡೆ ಕಾಂಕ್ರೀಟ್ ಗಟ್ಟಿಯಾಗಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಅಲ್ಲದೆ ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು, ಅವುಗಳನ್ನು ತಪ್ಪಿಸಲು ಹೋಗಿ ಅಪಘಾತಗಳು ಸಂಭವಿಸುತ್ತಿವೆ.

ರಸ್ತೆಯ ಎರಡೂ ಬದಿಗಳಲ್ಲಿ ಗಿಡಗಂಟೆಗಳು ಬೆಳೆದು ರಸ್ತೆಗೇ ಚಾಚಿಕೊಂಡಿದ್ದು, ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿದೆ. ಜೊತೆಗೆ ಕಸದ ರಾಶಿಗಳು ತುಂಬಿಕೊಂಡಿದ್ದು, ಪರಿಸರ ಮಾಲಿನ್ಯಕ್ಕೂ ಕಾರಣವಾಗಿದೆ.

ಸ್ಥಳೀಯರ ಪ್ರಕಾರ, ಈ ರಸ್ತೆಯಲ್ಲಿ ಸಮರ್ಪಕ ಸ್ಟ್ರೀಟ್ ಲೈಟ್ ವ್ಯವಸ್ಥೆ ಇಲ್ಲದಿರುವುದು ಅಪಘಾತಗಳ ಸಂಖ್ಯೆಯನ್ನು ಹೆಚ್ಚಿಸಿದೆ. ರಾತ್ರಿ ವೇಳೆ ವಾಹನ ಸವಾರರು ಕತ್ತಲಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕುಂದಾಪುರ, ಬೈಂದೂರು, ಪೆರಡೂರು ಸೇರಿದಂತೆ ವಿವಿಧ ಭಾಗಗಳಿಂದ ಮಣಿಪಾಲಕ್ಕೆ ಬರುವ ವಾಹನಗಳು ಇದೇ ರಸ್ತೆಯನ್ನು ಬಳಸುವುದರಿಂದ ದಿನದ 24 ಗಂಟೆಯೂ ವಾಹನ ಸಂಚಾರ ದಟ್ಟವಾಗಿರುತ್ತದೆ. ರಸ್ತೆ ಹದಗೆಟ್ಟ ಪರಿಣಾಮ ಆಗಾಗ್ಗೆ ಟ್ರಾಫಿಕ್ ಜಾಮ್ ಕೂಡ ಉಂಟಾಗುತ್ತಿದೆ.

ಈ ರಸ್ತೆಗೆ ಅನುದಾನ ಮಂಜೂರಾಗಿದೆ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೇಳುತ್ತಿದ್ದರೂ, ಸ್ಥಳದಲ್ಲಿ ಯಾವುದೇ ಕಾಮಗಾರಿ ಆರಂಭವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಕನಿಷ್ಠ ತಾತ್ಕಾಲಿಕ ಪರಿಹಾರವಾಗಿ ಜಲ್ಲಿ ಮಿಶ್ರಿತ ಸಿಮೆಂಟ್ ಹಾಕಿ ರಸ್ತೆ ದುರಸ್ತಿ ಮಾಡುವುದು, ನೀರು ಸರಾಗವಾಗಿ ಹರಿಯುವಂತೆ ಚರಂಡಿ ವ್ಯವಸ್ಥೆ ಕಲ್ಪಿಸುವುದು, ಗಿಡಗಂಟೆ ತೆರವುಗೊಳಿಸುವುದು ಹಾಗೂ ಕಸದ ರಾಶಿ ಸ್ವಚ್ಛಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದೇ ವೇಳೆ ಮಣಿಪಾಲ ಸಂಪರ್ಕಿಸುವ ಸೇತುವೆಯಲ್ಲಿಯೂ ಸಮರ್ಪಕ ಸ್ಟ್ರೀಟ್ ಲೈಟ್ ಹಾಗೂ ಸಿಸಿ ಕ್ಯಾಮೆರಾ ವ್ಯವಸ್ಥೆ ಇಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ. ರಾತ್ರಿ ವೇಳೆ ಕೆಲವರು ವಾಹನಗಳನ್ನು ನಿಲ್ಲಿಸಿ ಮದ್ಯಪಾನ ಮಾಡುತ್ತಿರುವ ದೃಶ್ಯಗಳು ಕಂಡುಬರುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಪೊಲೀಸ್ ಇಲಾಖೆ ಹಾಗೂ ನಗರಸಭೆ ಜಂಟಿಯಾಗಿ ಕ್ರಮ ಕೈಗೊಂಡು ಸೇತುವೆ ಹಾಗೂ ರಸ್ತೆ ಪ್ರದೇಶವನ್ನು ಸುರಕ್ಷಿತ ವಲಯವನ್ನಾಗಿ ಘೋಷಿಸಬೇಕು. ಸ್ಟ್ರೀಟ್ ಲೈಟ್, ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ತಕ್ಷಣ ಕಲ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here