ನಾಲ್ಕು ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ದಂಧೆ : ಸಾಮಾಜಿಕ ಕಾರ್ಯಕರ್ತ ಸತೀಶ್‌ ಪೂಜಾರಿ ಕೀಳಂಜೆ ಆಗ್ರಹ

0
30

ಉಡುಪಿ: ಬ್ರಹ್ಮಾವರ ತಾಲೂಕಿನ ಆರೂರು, ಉಪ್ಪುರು, ಹಾವಂಜೆ ಹಾಗೂ ಕಾಪು ತಾಲೂಕಿನ ಕುಕ್ಕೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕೆಂಪು ಮಣ್ಣು ಮತ್ತು ಖನಿಜಾಂಶಯುಕ್ತ ಮಣ್ಣಿನ ಸಾಗಾಟ ನಡೆಯುತ್ತಿದ್ದು, ಇದರಿಂದ ಪರಿಸರ ಹಾಗೂ ಕೃಷಿ ಭೂಮಿಗಳಿಗೆ ಅಪಾರ ಹಾನಿಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಪ್ರದೇಶಗಳಲ್ಲಿನ ಹಲವಾರು ಗುಡ್ಡಗಳು, ಕೃಷಿ ಭೂಮಿಗಳು ಹಾಗೂ ಅರಣ್ಯ ಪ್ರದೇಶಗಳ ಅಂಚಿನಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಅಗೆದು ಸಾಗಿಸಲಾಗುತ್ತಿದೆ. ಖಾಸಗಿ ಜಾಗವನ್ನು ಸಮತಟ್ಟು ಮಾಡುವ ನೆಪದಲ್ಲಿ ನೂರಾರು ಅಡಿ ಆಳದವರೆಗೆ ಮಣ್ಣು ತೆಗೆಯಲಾಗುತ್ತಿದ್ದು, ಭೂಮಿಯ ಸ್ವಾಭಾವಿಕ ಸ್ವರೂಪವೇ ಬದಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಮಣ್ಣು ವ್ಯಾಪಾರಿಗಳು ಭೂ ಮಾಲೀಕರಿಗೆ ಅಲ್ಪ ಪ್ರಮಾಣದ ಹಣ ನೀಡಿ ಸಾವಿರಾರು ಲೋಡ್ ಕೆಂಪು ಮಣ್ಣನ್ನು ವಿವಿಧ ಭಾಗಗಳಿಗೆ ಸಾಗಿಸುತ್ತಿದ್ದಾರೆ. ಒಂದೊಂದು ಲೋಡ್‌ಗೆ ಸಾವಿರಾರು ರೂಪಾಯಿ ಲಾಭ ಗಳಿಸುತ್ತಿರುವ ಈ ದಂಧೆ ಕೋಟ್ಯಂತರ ರೂಪಾಯಿ ವ್ಯವಹಾರವಾಗಿ ಬೆಳೆದಿದೆ ಎನ್ನಲಾಗಿದೆ. ಅರಣ್ಯ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇದ್ದರೂ ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಅತಿಯಾದ ಮಣ್ಣು ಅಗೆತದಿಂದ ಭೂಗರ್ಭ ಜಲಮಟ್ಟ ಕುಸಿಯುತ್ತಿದ್ದು, ಹಲವೆಡೆ ಬಾವಿಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಇದರಿಂದ ರೈತರು ಹಾಗೂ ಗ್ರಾಮೀಣ ಪ್ರದೇಶದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಕಡೆಗಳಲ್ಲಿ ಮಣ್ಣು ಅಗೆದ ಪರಿಣಾಮ ಮನೆಗಳಿಗೂ ಅಪಾಯ ಉಂಟಾಗಿದ್ದು, ಮಳೆಗಾಲದಲ್ಲಿ ಭೂಕುಸಿತದ ಆತಂಕ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಣ್ಣು ಸಾಗಿಸುವ ಟಿಪ್ಪರ್, ಲಾರಿ ಹಾಗೂ ಇತರ ವಾಹನಗಳು ಪಂಚಾಯಿತಿ ಮತ್ತು ಸಾರ್ವಜನಿಕ ರಸ್ತೆಗಳ ಮೂಲಕ ಅತಿಯಾದ ಭಾರ ಹೊತ್ತು ಸಂಚರಿಸುತ್ತಿದ್ದು, ರಸ್ತೆಗಳಿಗೂ ಹಾನಿಯಾಗುತ್ತಿದೆ. ಹಲವಾರು ವಾಹನಗಳು ಅಗತ್ಯ ದಾಖಲೆಗಳು ಮತ್ತು ಫಿಟ್ನೆಸ್ ಪ್ರಮಾಣಪತ್ರಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ. ಈ ವಾಹನಗಳಿಂದ ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ್ದರೂ ಮಣ್ಣು ಸಾಗಾಟ ಮಾತ್ರ ನಿರಂತರವಾಗಿ ನಡೆಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮ ಮಣ್ಣು ದಂಧೆ ಬಗ್ಗೆ ಪ್ರಶ್ನಿಸುವವರಿಗೆ ಜೀವ ಬೆದರಿಕೆ ಹಾಗೂ ವಿವಿಧ ರೀತಿಯ ಒತ್ತಡಗಳು ಎದುರಾಗುತ್ತಿವೆ ಎನ್ನಲಾಗಿದೆ. ಹಣದ ಆಮಿಷ ಒಡ್ಡಿ ಸಾರ್ವಜನಿಕರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಂಬಂಧಿತ ಇಲಾಖೆಗಳು ಜಂಟಿಯಾಗಿ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣ್ಣು ಅಗೆತ ಪ್ರದೇಶಗಳ ಸಮಗ್ರ ಪರಿಶೀಲನೆ ನಡೆಸಬೇಕು. ಅಕ್ರಮವಾಗಿ ಮಣ್ಣು ತೆಗೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಪರಿಸರ ಹಾನಿಗೆ ಕಾರಣರಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜಿ, ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜಾ ಕೊಳಲಗಿರಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಂದ್ರ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ನಡುಮನೆ ಹಾಗೂ ಸ್ಥಳೀಯ ರೈತರು ಮತ್ತು ನಿವಾಸಿಗಳು ಈ ಬಗ್ಗೆ ಜಿಲ್ಲಾಡಳಿತದ ತುರ್ತು ಮಧ್ಯಪ್ರವೇಶವನ್ನು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here