ಸರ್ಕಾರಿ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ: 4,000 ಇವಿಎಂ ಯಂತ್ರಗಳು ಸುಟ್ಟು ಭಸ್ಮ..!

0
33

ಕೊಲ್ಕತ್ತಾ : ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಸರ್ಕಾರಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 4,000 ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳು (EVM) ಸುಟ್ಟು ಕರಕಲಾಗಿವೆ. ದಕ್ಷಿಣ ಕೊಲ್ಕತ್ತಾದ ಅಲಿಪೋರ್ ಪ್ರದೇಶದಲ್ಲಿರುವ 9 ಅಂತಸ್ತಿನ ಸರ್ಕಾರಿ ಕಟ್ಟಡದಲ್ಲಿ ಬುಧವಾರ ಕಾಣಿಸಿಕೊಂಡ ಬೆಂಕಿ ಹಲವು ಗಂಟೆಗಳ ಕಾಲ ಹೊತ್ತಿ ಉರಿದಿದ್ದು, ಘಟನೆ ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ.

ಈ ಕಟ್ಟಡದಲ್ಲಿ ದಕ್ಷಿಣ 24 ಪರಗಣ ಜಿಲ್ಲಾ ಪರಿಷತ್ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದವು. ಬೆಂಕಿಯಿಂದ ನಾಶವಾದ ಇವಿಎಂ ಯಂತ್ರಗಳನ್ನು ಈ ವರ್ಷ ನಡೆದ ವಿಧಾನಸಭಾ ಚುನಾವಣೆಯ ವೇಳೆ 10 ಮತಕ್ಷೇತ್ರಗಳಲ್ಲಿ ಬಳಸಲಾಗಿತ್ತು ಎಂದು ಪಶ್ಚಿಮ ಬಂಗಾಳದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಕೌಶಿಕ್ ಚೌಧರಿ ತಿಳಿಸಿದ್ದಾರೆ.

ಬೆಂಕಿ ಹಿಂದಿನ ರಹಸ್ಯವೇನು?

ಘಟನೆಯ ಕುರಿತು ಮಾತನಾಡಿದ ಸಚಿವ ಕೌಶಿಕ್ ಚೌಧರಿ, “ಇದು ಸಾಮಾನ್ಯ ಅಗ್ನಿ ಅವಘಡದಂತೆ ಕಾಣುತ್ತಿಲ್ಲ. ಬೆಂಕಿ ಹೇಗೆ ಮೇಲಿನ ಅಂತಸ್ತುಗಳಿಗೆ ತಲುಪಿತು ಎಂಬುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರ ಹಿಂದೆ ಯಾವುದೇ ಪಿತೂರಿ ಇದೆಯೇ ಎಂಬುದನ್ನು ತನಿಖೆ ಮೂಲಕ ತಿಳಿದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಮೊದಲಿಗೆ ಎರಡನೇ ಮತ್ತು ಮೂರನೇ ಅಂತಸ್ತಿನಲ್ಲಿ ಕಾಣಿಸಿಕೊಂಡ ಬೆಂಕಿ, ಮಧ್ಯದ ಕೆಲವು ಅಂತಸ್ತುಗಳಿಗೆ ಹೆಚ್ಚಿನ ಹಾನಿ ಮಾಡದೆ ನೇರವಾಗಿ ಏಳನೇ ಹಾಗೂ ಎಂಟನೇ ಅಂತಸ್ತುಗಳಿಗೆ ಹರಡಿರುವುದು ತನಿಖಾಧಿಕಾರಿಗಳ ಗಮನ ಸೆಳೆದಿದೆ.

ಎಫ್‌ಐಆರ್ ದಾಖಲು, ತನಿಖೆ ಆರಂಭ

ಘಟನೆಯ ಸಂಬಂಧ ಅಲಿಪೋರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸೇರಿದಂತೆ ವಿವಿಧ ಕಾರಣಗಳ ಕುರಿತು ಪರಿಶೀಲನೆ ನಡೆಯುತ್ತಿದೆ. ಫೋರೆನ್ಸಿಕ್ ತಜ್ಞರು ಸ್ಥಳ ಪರಿಶೀಲನೆ ನಡೆಸಿ ಮಾದರಿಗಳನ್ನು ಸಂಗ್ರಹಿಸಲಿದ್ದು, ವರದಿ ಬಂದ ಬಳಿಕವೇ ಬೆಂಕಿಯ ನಿಖರ ಕಾರಣ ತಿಳಿಯಲಿದೆ.

ರಾಜಕೀಯ ವಲಯದಲ್ಲಿ ಸಂಚಲನ

4,000 ಇವಿಎಂಗಳು ಬೆಂಕಿಗೆ ಆಹುತಿಯಾಗಿರುವುದು ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ. ಕೆಲ ನಾಯಕರು ಪಿತೂರಿಯ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here