ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ Malviya Nagar ಪ್ರದೇಶದಲ್ಲಿರುವ ಪ್ರಸಿದ್ಧ ಲೆಮನ್ ಗ್ರೀನ್ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 21 ಮಂದಿ ಸಜೀವ ದಹನಗೊಂಡಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂದು ಬೆಳಿಗ್ಗೆ ಸಂಭವಿಸಿದ ಈ ದುರಂತದಲ್ಲಿ ಸಾವಿಗೀಡಾದವರಲ್ಲಿ ಹೆಚ್ಚಿನವರು ವಿದೇಶಿ ಪ್ರಜೆಗಳು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ದೆಹಲಿ ದಕ್ಷಿಣ ವಿಭಾಗದ ಡಿಸಿಪಿ Anant Mittal ಮಾಹಿತಿ ನೀಡಿದ್ದು, ಬೆಳಿಗ್ಗೆ 8:48ಕ್ಕೆ ಮಾಳವೀಯ ನಗರದ ಫ್ಲೋರಿಶ್ ಸ್ಟೇ ಬಿ&ಬಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿತು. ಕೂಡಲೇ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ತಿಳಿಸಿದ್ದಾರೆ.
8 ಅಗ್ನಿಶಾಮಕ ವಾಹನಗಳ ಸಹಾಯದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಪೊಲೀಸರು, ಅಗ್ನಿಶಾಮಕ ದಳ ಹಾಗೂ ತುರ್ತು ಸೇವಾ ಸಿಬ್ಬಂದಿಯ ಸಂಯೋಜಿತ ಕಾರ್ಯಾಚರಣೆಯಿಂದ 40ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ದುರಂತದಲ್ಲಿ 21 ಮಂದಿ ಮೃತಪಟ್ಟಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಸ್ಥಳದಲ್ಲಿ ಇನ್ನೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಈ ಅಗ್ನಿ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹50,000 ಪರಿಹಾರವನ್ನು ಘೋಷಿಸಿದ್ದಾರೆ.

