ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ರಾಪಿಡೋ ಬೈಕ್ ಹಾಗೂ ರೆಂಟಲ್ ಬೈಕ್ ಸೇವೆಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶುಕ್ರವಾರ ಆಟೋ ರಿಕ್ಷಾ ಸೇವೆಯನ್ನು ದಿನಪೂರ್ತಿ ಸ್ಥಗಿತಗೊಳಿಸಿದ ಚಾಲಕರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಮೇದಪ್ಪ ಹಾಗೂ ಮಡಿಕೇರಿ ಪ್ರವಾಸಿಗರ ಕಾರು ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ವೀರೇಂದ್ರ ಗೌಡ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ ನಗರದ ಎವಿ ಶಾಲೆಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಆಟೋ ಸೇವೆ ಸ್ಥಗಿತ
ರಾಪಿಡೋ ಮತ್ತು ರೆಂಟಲ್ ಬೈಕ್ ಸೇವೆಗಳ ವಿರುದ್ಧದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬೆಳಗಿನಿಂದ ಸಂಜೆಯವರೆಗೆ ಆಟೋ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಆಟೋ ನಿಲ್ದಾಣ ಹಾಗೂ ಜಿ.ಟಿ.ಅಯ್ಯಪ್ಪ ವೃತ್ತದ ಬಳಿಯ ಪ್ರಮುಖ ಆಟೋ ನಿಲ್ದಾಣಗಳು ಆಟೋರಿಕ್ಷಾಗಳಿಲ್ಲದೆ ಖಾಲಿಯಾಗಿದ್ದವು.
ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ
ಪ್ರತಿಭಟನಾ ಮೆರವಣಿಗೆಯ ಬಳಿಕ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ನಂತರ ಆಟೋ ಮಾಲೀಕರು ಮತ್ತು ಚಾಲಕರ ಸಂಘ ಹಾಗೂ ಕಾರು ಮಾಲೀಕರು ಮತ್ತು ಚಾಲಕರ ಸಂಘದ ಪದಾಧಿಕಾರಿಗಳು ಜಂಟಿಯಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ಸಂಕಷ್ಟ:
ಮಡಿಕೇರಿ ನಗರದಲ್ಲಿ ಒಂದು ಸಾವಿರಕ್ಕೂ ಅಧಿಕ ಆಟೋರಿಕ್ಷಾಗಳು ಕಾರ್ಯಚರಿಸುತ್ತಿದ್ದು, ಸಾವಿರಾರು ಕುಟುಂಬಗಳು ಆಟೋ ಮತ್ತು ಟ್ಯಾಕ್ಸಿ ಉದ್ಯಮವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿವೆ. ನಿರುದ್ಯೋಗಿ ಯುವಕ-ಯುವತಿಯರು ಸ್ವಯಂ ಉದ್ಯೋಗದ ದೃಷ್ಟಿಯಿಂದ ಆಟೋ ಚಾಲನೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಡಗಿನಲ್ಲಿ ರೆಂಟಲ್ ಬೈಕ್‌ಗಳ ಜೊತೆಗೆ ರಾಪಿಡೋ ಬೈಕ್ ಸೇವೆ ಆರಂಭಿಸಲು ಮುಂದಾಗಿರುವುದು ಸ್ಥಳೀಯ ಆಟೋ ಮತ್ತು ಟ್ಯಾಕ್ಸಿ ಚಾಲಕರ ಜೀವನೋಪಾಯಕ್ಕೆ ತೊಂದರೆಯುಂಟುಮಾಡಲಿದೆ ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ.
ಈಗಾಗಲೇ ಮಡಿಕೇರಿಯಲ್ಲಿ ಕಾರ್ಯಚರಿಸುತ್ತಿರುವ ರೆಂಟಲ್ ಬೈಕ್ ಮಳಿಗೆಗಳಲ್ಲಿ ನೂರಕ್ಕೂ ಅಧಿಕ ದ್ವಿಚಕ್ರ ವಾಹನಗಳು ಬಾಡಿಗೆಗೆ ಲಭ್ಯವಿವೆ. ಇದರಿಂದ ಸ್ಥಳೀಯ ಆಟೋ ಮತ್ತು ಟ್ಯಾಕ್ಸಿ ಚಾಲಕರ ಆದಾಯಕ್ಕೆ ಹೊಡೆತ ಬೀಳುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂಚಾರ ನಿಯಮ ಉಲ್ಲಂಘನೆ ಆರೋಪ
ಬಾಡಿಗೆ ಬೈಕ್‌ಗಳನ್ನು ಬಳಸುವ ಕೆಲವು ಪ್ರವಾಸಿಗರು ಸಂಚಾರ ನಿಯಮಗಳನ್ನು ಪಾಲಿಸದೆ, ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದಾರೆ. ಅಲ್ಲದೆ, ಒಂದೇ ಬೈಕ್‌ನಲ್ಲಿ ಮೂವರು-ನಾಲ್ವರು ಪ್ರಯಾಣಿಸುವುದು ಹಾಗೂ ವೀಲಿಂಗ್‌ನಂತಹ ಅಪಾಯಕಾರಿ ಸಾಹಸಗಳಿಗೆ ಮುಂದಾಗುತ್ತಿರುವುದು ಕಂಡುಬಂದಿದೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯಿದ್ದು, ಸ್ಥಳೀಯ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕೊಡಗು ಪ್ರವಾಸಿ ಜಿಲ್ಲೆಯಾಗಿರುವುದರಿಂದ ಸ್ಥಳೀಯ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೂ ಜೀವನೋಪಾಯದ ಅವಕಾಶ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾ, ಕುಟುಂಬ ನಿರ್ವಹಣೆಗಾಗಿ ಆಟೋ ಮತ್ತು ಟ್ಯಾಕ್ಸಿ ಉದ್ಯಮವನ್ನೇ ಅವಲಂಬಿಸಿರುವ ಬಡ ಚಾಲಕರ ಸಮಸ್ಯೆಗಳನ್ನು ಸಾರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ವೈಟ್ ಬೋರ್ಡ್ ನಂಬರ್ ಪ್ಲೇಟ್ ಹೊಂದಿರುವ ಬೈಕ್‌ಗಳ ಮೂಲಕ ರಾಪಿಡೋ ಸೇವೆ ನಡೆಸಲು ಅವಕಾಶ ನೀಡಬಾರದು. ಕೊಡಗಿನಲ್ಲಿ ರೆಂಟಲ್ ಬೈಕ್ ಹಾಗೂ ರಾಪಿಡೋ ಸೇವೆಗಳಿಗೆ ಕಡಿವಾಣ ಹಾಕುವ ಮೂಲಕ ಸ್ಥಳೀಯ ಆಟೋ ಮತ್ತು ಟ್ಯಾಕ್ಸಿ ಚಾಲಕರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ತಮ್ಮ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವರದಿ: ಪ್ರಿತುನ್ ಪೂವಣ್ಣ

