ಸರಕಾರದ ರೈತ ವಿರೋಧಿ ನೀತಿಯಿಂದಾಗಿ ರೈತರ ಬದುಕು ದುರವಸ್ಥೆಗೆ ಈಡಾಗಿದೆ. ರೈತರು ಬೆಳೆದ ಕೃಷಿ ಮತ್ತು ಹೈನುಗಾರಿಕೆಗಳಿಗೆ ಮೌಲ್ಯಾಧಾರಿತ ಬೆಲೆಯನ್ನು ನಿಗದಿಗೊಳಿಸಬೇಕೆಂದು ಕಿಸಾನ್ ಸಂಘ ಹೋರಾಟ ನಡೆಸಿಕೊಂಡು ಬರುತ್ತಿದೆ.

ಸರಕಾರ ರೈತರಿಗೆ ಪ್ರೋತ್ಸಾಹ ಧನ ಸೇರಿ ಕೇವಲ 42 ರೂ . ನೀಡುತ್ತಿದೆ. ಅದನ್ನು 65 ರೂಪಾಯಿಗೆ ನಿಗದಿಗೊಳಿಸಬೇಕು. ಹಲವು ತಿಂಗಳುಗಳಿಂದ ಬಾಕಿ ಇರಿಸಿಕೊಂಡಿರುವ ಪ್ರೋತ್ಸಾಹ ಧನವನ್ನು ರೈತರ ಖಾತೆಗೆ ಬಿಡುಗಡೆಗೊಳಿಸಬೇಕು.ಪುರಸಭಾ ವ್ಯಾಪ್ತಿಯಿಂದ 3 ಕಿಲೋಮೀಟರ್ ವ್ಯಾಪ್ತಿಯವರೆಗೆ ಅಕ್ರಮ ಸಕ್ರಮ ಆಸ್ತಿ ಮಂಜೂರು ಮಾಡುವಂತಿಲ್ಲ ಎಂಬ ಕಾಯ್ದೆಗೆ ತಿದ್ದುಪಡಿ ತರಬೇಕು. ಅಕ್ರಮ ಸಕ್ರಮ ಸಮಿತಿಯಲ್ಲಿ ಮಂಡಿಸದೆಯೇ ವಜಾಗೊಳಿಸುವ ಆದೇಶವನ್ನು ಹಿಂಪಡೆಯಬೇಕು . ಕೃಷಿ ಮಾಡಿದವನೇ ಭೂಮಿಯ ಒಡೆಯ ಎಂದು ಫೋಷಿಸಿ ಹಕ್ಕುಪತ್ರ ನೀಡಬೇಕು . ಕುಮ್ಕಿ ఆಸ್ತಿಗೆ ಹಕ್ಕುಪತ್ರ ರೈತನಿಗೆ ನೀಡಬೇಕು .

ಪ್ರಕೃತಿ ವಿಕೋಪದಿಂದ ನಾಶವಾದ ಒಂದು ಮರಕ್ಕೆ 20000 ಇಂದ 25,000 ವರೆಗೆ ವೈಜ್ಞಾನಿಕ ಪರಿಹಾರವನ್ನು ನೀಡುವಂತಾಗಬೇಕು ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಮೇ 29 ರಂದು ಮೂಡುಬಿದಿರೆ ಸರಕಾರಿ ಆಸ್ಪತ್ರೆಯ ಎದುರುಗಡೆಯಿಂದ ತಹಸಿಲ್ದಾರ ಕಚೇರಿಯ ವರೆಗೆ ರೈತರ ಪ್ರತಿಭಟನ ಜಾಥಾ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದರು. ಕಿಸಾನ್ ಸಂಘದ ಅಧ್ಯಕ್ಷ ಶಾಂತಿಪ್ರಸಾದ ಹೆಗ್ಡೆ , ಉಪಾಧ್ಯಕ್ಷ ವಲೇರಿಯನ್ ಕುಟಿನೋ ಭಾಷಣ ಮಾಡಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ವಸಂತ ಭಟ್ ಪಯ್ಯಾಡಿ ಮನವಿಯನ್ನು ಓದಿ ಹೇಳಿದರು. ಈ ಸಂದರ್ಭದಲ್ಲಿ ವಿವಿಧ ರೈತ ಮುಖಂಡರೊಂದಿಗೆ ಪ್ರಗತಿಪರ ಕೃಷಿಕ ಜಾಯ್ಲಸ್ ಡಿಸೋಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ರಾಧಾಕೃಷ್ಣ ಶೆಟ್ಟಿ, ನೇಮಿರಾಜ್ ಶೆಟ್ಟಿ, ವೆಂಕಟೇಶ್ ಕೋಟ್ಯಾನ್, ಹಾಗೂ ಇತರರು ಹಾಜರಿದ್ದರು.

