ಉಡುಪಿ : ಜಿಲ್ಲೆಯ ಹೆಬ್ರಿ ಗ್ರಾಮದ ನಿವಾಸಿ ಕೀರ್ತನ ಪ್ರಭು (34) ಅವರ ಮನೆಯಲ್ಲಿ ಭಾರೀ ಕಳ್ಳತನ ನಡೆದಿದ್ದು, ಸುಮಾರು ₹59.97 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.
ಕೀರ್ತನ ಪ್ರಭು ಅವರು ಬೆಳಿಗ್ಗೆ ಸುಮಾರು 6:45 ಗಂಟೆಗೆ ಎದ್ದು ನೋಡಿದಾಗ ಮನೆಯ ಹಿಂಭಾಗ ಮತ್ತು ಮುಂಭಾಗದ ಬಾಗಿಲುಗಳು ತೆರೆದಿರುವುದು ಗಮನಕ್ಕೆ ಬಂದಿದೆ. ಹಾಲ್ ಬಳಿ ಇದ್ದ ಗೋದ್ರೇಜ್ ಬಾಗಿಲು ಕೂಡ ತೆರೆಯಲ್ಪಟ್ಟಿರುವುದನ್ನು ಕಂಡು ಅನುಮಾನಗೊಂಡ ಅವರು ಮೊದಲ ಮಹಡಿಯ ಮಲಗುವ ಕೋಣೆಗೆ ತೆರಳಿ ಪರಿಶೀಲಿಸಿದ್ದಾರೆ.
ಈ ವೇಳೆ ಕೋಣೆಯಲ್ಲಿದ್ದ ಕಬ್ಬಿಣದ ಗೋದ್ರೇಜ್ ಲಾಕರ್ ಒಡೆದು ತೆರೆಯಲ್ಪಟ್ಟಿರುವುದು ಬೆಳಕಿಗೆ ಬಂದಿದೆ. ಕಳ್ಳರು ಮನೆಯ ಹಿಂಭಾಗದ ಕಿಟಕಿಯ ಚಿಲಕದ ಕೊಂಡಿಯನ್ನು ಮೀಟಿ ಒಳನುಗ್ಗಿ, ಮೊದಲ ಮಹಡಿಯಲ್ಲಿ ಇರಿಸಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಇತರ ಬೆಲೆಬಾಳುವ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2026ರಂತೆ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 331(4) ಮತ್ತು 305 ಅಡಿಯಲ್ಲಿ ತನಿಖೆ ಮುಂದುವರಿದಿದೆ.

