ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಪ್ರದೇಶದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು ₹7.60 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಪೊಲೀಸರನ್ನು ಕಂಡು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಜುಲೈ 29ರ ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಆನಂದ ಎಂ. ಹಾಗೂ ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಪಿಲಿಚಂಡಿಕಲ್ಲು ಪ್ರದೇಶದಲ್ಲಿ ಆಟೋ ರಿಕ್ಷಾ ಸಮೀಪ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಗಮನಿಸಿದರು. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಕುವೆಟ್ಟು ನಿವಾಸಿ ತ್ವಲಹ್ ಯಾನೆ ಅನ್ವರ್ ಅಲಿಯಾಸ್ ಅನ್ಸರ್ (21) ಎಂದು ತಿಳಿದುಬಂದಿದೆ.
ಆರೋಪಿಯ ತಪಾಸಣೆ ನಡೆಸಿದ ವೇಳೆ 27 ಗ್ರಾಂ ಗಾಂಜಾ ಹಾಗೂ ಒಂದು ಮೊಬೈಲ್ ಫೋನ್ ಪತ್ತೆಯಾಯಿತು. ಬಳಿಕ ಸ್ಥಳದಲ್ಲಿದ್ದ ಆಟೋ ರಿಕ್ಷಾ ಹಾಗೂ ಕಾರನ್ನು ಪರಿಶೀಲಿಸಿದಾಗ, 76.59 ಗ್ರಾಂ ತೂಕದ ನಿಷೇಧಿತ ಎಂಡಿಎಂಎ (MDMA) ಮಾದಕ ವಸ್ತು ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ₹7.60 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಬಂಧಿತ ಅನ್ಸರ್‌ಗೆ ಮಾದಕ ವಸ್ತು ಪೂರೈಸಲು ಅಮ್ಜತ್ ಖರಾರ್ ಎಂಬಾತ ಕಾರಿನಲ್ಲಿ ಬಂದಿದ್ದನು ಎಂದು ತಿಳಿದುಬಂದಿದೆ. ಆದರೆ, ಪೊಲೀಸರನ್ನು ಕಂಡ ತಕ್ಷಣ ಆತ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪರಾರಿಯಾಗಿರುವ ಆರೋಪಿಯ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯ ಮುಂದುವರಿಸಿದ್ದು, ಈ ಪ್ರಕರಣದ ಹಿಂದೆ ಇನ್ನಷ್ಟು ಮಾದಕ ವಸ್ತು ಜಾಲ ಇರುವ ಸಾಧ್ಯತೆಯನ್ನೂ ತನಿಖೆ ನಡೆಸಲಾಗುತ್ತಿದೆ. ಬೆಳ್ತಂಗಡಿ ಪೊಲೀಸ್ ತಂಡದ ಈ ಕಾರ್ಯಾಚರಣೆ ಮಾದಕ ವಸ್ತು ಸಾಗಾಟ ತಡೆಗೆ ಮಹತ್ವದ ಯಶಸ್ಸಾಗಿ ಪರಿಗಣಿಸಲಾಗಿದೆ.

