ಮೂಡುಬಿದಿರೆ ತಾಲೂಕು ಪ್ರಜಾ ಸೇವಾ ಆಂದೋಲನದ ಸಭೆ

0
6

ಮೂಡುಬಿದಿರೆ ತಾಲೂಕಿನ ಪ್ರಜಾ ಸೇವಾ ಆಂದೋಲನದ ಸಭೆ ನವೆಂಬರ್ 21ರಂದು ಪಾಲಡ್ಕ ಕಡಂದಲೆ ಗ್ರಾಮದ ಪೂಪಾಡಿಕಲ್ಲು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ತಹಸೀಲ್ದಾರ ಶ್ರೀಧರ ಮುಂದಲಮನಿ ಉದ್ಘಾಟಿಸಿ ಜನರ ಬಳಿಗೆ ಅಧಿಕಾರಿಗಳು ಬಂದು ತೊಂದರೆಗಳನ್ನು ನಿವಾರಿಸುವ ಪ್ರಯತ್ನವನ್ನು ಈ ಮೂಲಕವಾಗಿ ಮಾಡಿಕೊಡಲಾಗುತ್ತಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಮಾಡಿಕೊಂಡರೆ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಅವಕಾಶವಾಗುತ್ತದೆ ಎಂದು ತಿಳಿಸಿದರು. ಹೆಚ್ಚಿನ ಅಧಿಕಾರಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಕಾಂತಾವರ ಹಾಗೂ ಪಾಲಾಡ್ಕ ಪ್ರದೇಶದ ಹೆಚ್ಚಿನ ಜನರು ಕೃಷಿಯನ್ನೇ ಮುಖ್ಯ ಕಸುಬನ್ನಾಗಿ ಹೊಂದಿರುತ್ತಾರೆ. ಈ ಗ್ರಾಮ ವ್ಯಾಪ್ತಿಯಲ್ಲಿ ಖಾಸಗಿ ಡೆಕ್ಕ ಎನ್ನುವ ಸಂಸ್ಥೆಯವರು ಪರಿಸರ ಜಾಗೃತಿಯ ಹೆಸರಿನಲ್ಲಿ ಗ್ರಾಮಸ್ಥರನ್ನು ಹೆದರಿಸುತ್ತಿದ್ದಾರೆ. ಸರಕಾರಿ ಪ್ರದೇಶಗಳನ್ನು ಖಾಸಗಿ ವ್ಯಕ್ತಿಗಳ ಜಾಗದೊಂದಿಗೆ ಸೇರಿಸಿಕೊಂಡು ಅಲ್ಲಿರುವ ಬೆಲೆಬಾಳುವ ಮರಗಳನ್ನು ಕಡಿದು ಜೆಸಿಬಿಯಲ್ಲಿ ಸಮತಟ್ಟುಗೊಳಿಸಿ ವಾಣಿಜ್ಯ ಬೆಳೆಗಳನ್ನು ಬೆಳೆಸಿ ಅವ್ಯವಹಾರವನ್ನು ನಡೆಸುತ್ತಿದ್ದಾರೆ ಎಂದು ಆ ಗ್ರಾಮಸ್ಥರು ತಹಸಿಲ್ದಾರರ ಬಳಿ ದಾಖಲೆಯೊಂದಿಗಿನ ದೂರನ್ನು ಈ ಸಂದರ್ಭದಲ್ಲಿ ಸಲ್ಲಿಸಿದರು.

ತತ್ಸಂಬಂಧಿ ದೂರಿನ ಬಗ್ಗೆ ಸ್ಥಳೀಯ ಜನಪ್ರತಿನಿಧಿ ಸುಚರಿತ ಶೆಟ್ಟಿ ಮಾತನಾಡಿ ಸಣ್ಣ ಹಿಡುವಳಿದಾರರ ಕೃಷಿ ಭೂಮಿಯಲ್ಲಿ ಕೆಲಸ ಮಾಡಲು, ಸೊಪ್ಪು ಮೇವು ಇತ್ಯಾದಿಗಳಿಗಾಗಿ ಸರಕಾರಿ ಕುಮ್ಕಿ ಪ್ರದೇಶಗಳಿಗೆ ಹೋದಾಗ ಈ ಖಾಸಗಿ ಡೆಕ್ಕ ಪರಿಸರ ಜಾಗೃತಿ ಹೆಸರಿನ ಸಂಸ್ಥೆಯವರು ಅನಗತ್ಯ, ಅನವಶ್ಯಕವಾಗಿ ಆತಂಕವನ್ನು, ತೊಂದರೆಯನ್ನು ಉಂಟು ಮಾಡುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿ ಸಂಸ್ಥೆಗಳಿಂದ ಯಾವುದೇ ಒಪ್ಪಿಗೆಯನ್ನು ಪಡೆಯದೆ ನಿರಂಕುಶದಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು. ಸಂಬಂಧಪಟ್ಟ ಎಲ್ಲ ಮಾಹಿತಿಗಳನ್ನು, ದಾಖಲೆಗಳನ್ನು ಪಡೆದ ತಹಸೀಲ್ದಾರರು ಮುಂದಿನ ಕಾರ್ಯವನ್ನು ಆದಷ್ಟು ಶೀಘ್ರ ಮಾಡಿಕೊಡುತ್ತೇನೆಂದು ಭರವಸೆ ಇತ್ತರು.

ವೇದಿಕೆಯಲ್ಲಿ ಅಧಿಕಾರಿಗಳಾದ ಭವಾನಿ ಶಂಕರ್ ಶೆಟ್ಟಿ, ಪುಟ್ಟರಾಜು, ವಿರೂಪಾಕ್ಷಪ್ಪ, ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕನ್ನಡ ಸಮಿತಿಯ ರಾಜೇಶ್ ಕಡಲ ಕೆರೆ ಹಾಜರಿದ್ದರು. ಉಪತಹಸಿಲ್ದಾರ್ ರಾಮ ಹಾಗೂ ಅರ್ಜುನ್ ಕಾರ್ಯಕ್ರಮ ನಿರ್ವಹಿಸಿದರು.