ಉಡುಪಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ವರ್ ಸಮಸ್ಯೆಯಿಂದ ನೋಂದಣಿ ಕಾರ್ಯ ಸ್ಥಗಿತ ಹಿನ್ನೆಲೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ

0
13

ಉಡುಪಿ : ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ವರ್ ಸಮಸ್ಯೆಯಿಂದ ನೋಂದಣಿ ಕಾರ್ಯಗಳು ನಡೆಯದೆ ನೂರಾರು ಮಂದಿ ಬೆಳಿಗ್ಗೆಯಿಂದ ಕಾಯುವ ಸನ್ನಿವೇಶ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕರ ಮಾಹಿತಿಯ ಮೇರೆಗೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕಳೆದ 3 ದಿನಗಳಿಂದಲೂ ಸರ್ವರ್ ಸಮಸ್ಯೆ ತಲೆದೋರಿದ್ದು, ಶುಕ್ರವಾರ ನೂರಾರು ಮಂದಿ ನೋಂದಣಿಗಾಗಿ ಕಚೇರಿಗೆ ಆಗಮಿಸಿದ್ದರೂ ಸಂಜೆ 4.30 ವರೆಗೆ ಒಂದು ಕಡತವೂ ಸರ್ವರ್ ವ್ಯತ್ಯಯದಿಂದಾಗಿ ನೋಂದಣಿಯಾಗಿಲ್ಲ. ಹಲವಾರು ಮಂದಿ ವಯೋವೃದ್ಧರು, ಪರವೂರಿನಿಂದ ಬಂದ ಸಾರ್ವಜನಿಕರು, ಮಹಿಳೆಯರು ಸಮಸ್ಯೆ ಎದುರಿಸುವಂತಾಗಿದೆ.

ಶಾಸಕ ಯಶ್ ಪಾಲ್ ಸುವರ್ಣ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಕಮಿಷನರ್ ಮಲ್ಲೈ ಮುಗಿಲನ್ ರವರಿಗೆ ದೂರವಾಣಿ ಕರೆ ಮಾಡಿ ಸರ್ವರ್ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಮನವಿ ಮಾಡಿ, ಇಂದು ನಿಗದಿಯಾದ ಕಡತಗಳ ನೋಂದಣಿಯನ್ನು ಇಂದು ರಾತ್ರಿಯೊಳಗೆ ನಡೆಸಲು ಅವಕಾಶ ನೀಡುವಂತೆ ಹಾಗೂ ಬಾಕಿ ಉಳಿದ ಕಡತಗಳನ್ನು ಆದಿತ್ಯವಾರ ನಡೆಸಲು ಅವಕಾಶ ನೀಡುವಂತೆ ತಿಳಿಸಿದರು.

ಉಡುಪಿ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಶಾಸಕರು ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ತರುವ ನೋಂದಣಿ ಕಚೇರಿಯಲ್ಲಿ ಪ್ರತಿ ನಿತ್ಯ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಸಮಸ್ಯೆಗೆ ಪರಿಹಾರ ಒದಗಿಸಲು ಕ್ರಮ ವಹಿಸುವಂತೆ ತಿಳಿಸಿದರು.

ರಾಜ್ಯ ಸರ್ಕಾರ ಉನ್ನತ ತಂತ್ರಜ್ಞಾನದ ಅಳವಡಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು . ಮುಂದಿನ ಅಧಿವೇಶನದಲ್ಲಿ ರಾಜ್ಯಾದ್ಯಂತ ಸರ್ವರ್ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿ ಸಮಸ್ಯೆಗೆ ಪರಿಹಾರ ಒದಗಿಸಲು ರಾಜ್ಯ ಸರಕಾರವನ್ನು ಒತ್ತಾಯಿಸುವುದಾಗಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.

LEAVE A REPLY

Please enter your comment!
Please enter your name here