ನಾಡಹಬ್ಬ ಮೈಸೂರು ದಸರಾ-2026ಕ್ಕೆ ಸಿದ್ಧತೆ ; ಸರ್ಕಾರದಿಂದ ದಿನಾಂಕ ಘೋಷಣೆ

0
7

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ–2026ರ ಆಚರಣೆಗೆ ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ಆರಂಭಿಸಿದ್ದು, ದಸರಾ ಮಹೋತ್ಸವದ ದಿನಾಂಕವನ್ನು ಅಧಿಕೃತವಾಗಿ ಅಂತಿಮಗೊಳಿಸಲಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ದಸರಾ ಪೂರ್ವಸಿದ್ಧತಾ ಸಭೆಯಲ್ಲಿ ಈ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ, ಅಕ್ಟೋಬರ್ 11ರಂದು ಬೆಳಿಗ್ಗೆ 11.50ಕ್ಕೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶುಭ ಧನುರ್ ಲಗ್ನದಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಅಕ್ಟೋಬರ್ 21ರಂದು ವಿಜಯದಶಮಿ ಪ್ರಯುಕ್ತ ವಿಶ್ವವಿಖ್ಯಾತ ಜಂಬೂಸವಾರಿ ನಡೆಯಲಿದೆ.

ದಸರಾ ಮಹೋತ್ಸವದ ಪ್ರಮುಖ ವೇಳಾಪಟ್ಟಿ

  • ಜುಲೈ 26: ದಸರಾ ಗಜಪಡೆಯ ‘ಗಜಪಯಣ’ ಆರಂಭ.
  • ಆಗಸ್ಟ್ 26: ಮೈಸೂರು ಅರಮನೆ ಪ್ರವೇಶ ದ್ವಾರದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ.
  • ಅಕ್ಟೋಬರ್ 11 (ಬೆಳಿಗ್ಗೆ 11.50): ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವ ಉದ್ಘಾಟನೆ.
  • ಅಕ್ಟೋಬರ್ 21: ವಿಜಯದಶಮಿ ಅಂಗವಾಗಿ ಜಂಬೂಸವಾರಿ.

ಜಂಬೂಸವಾರಿ ದಿನ ಮಧ್ಯಾಹ್ನ 1.36ರಿಂದ 1.56ರೊಳಗೆ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ನೆರವೇರಿಸಲಾಗುತ್ತದೆ. ಬಳಿಕ ಸಂಜೆ 4.10ರಿಂದ 4.35ರ ನಡುವೆ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನಡೆಯಲಿದೆ.

ಈ ಬಾರಿಯ ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಅಕ್ಟೋಬರ್ 18 ಹಾಗೂ 19ರಂದು ಎರಡು ದಿನಗಳ ಕಾಲ ಕಂಬಳ ಸ್ಪರ್ಧೆ ಆಯೋಜಿಸಿ, ಅದಕ್ಕಾಗಿ ಪ್ರತ್ಯೇಕ ಅನುದಾನ ನೀಡುವಂತೆ ಕಂಬಳ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ.

ಸಭೆಯಲ್ಲಿ ದಸರಾ ಸಂದರ್ಭದಲ್ಲಿ ಭದ್ರತೆ, ಸ್ವಚ್ಛತೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.

ಈ ಬಾರಿಯ ದಸರಾ ಮಹೋತ್ಸವದ ಉದ್ಘಾಟಕರನ್ನು ಆಯ್ಕೆ ಮಾಡುವ ಅಧಿಕಾರವನ್ನು ಸರ್ಕಾರದ ಉನ್ನತ ಮಟ್ಟದಲ್ಲಿ ನಿರ್ಧರಿಸುವ ಸಾಧ್ಯತೆ ಇದೆ.

ಸಭೆಯಲ್ಲಿ ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಕೆ. ವೆಂಕಟೇಶ್, ಮಾಜಿ ಸಚಿವ ಎಚ್.ಸಿ. ಮಹದೇವಪ್ಪ, ಶಾಸಕ ದೇವೇಗೌಡ ಸೇರಿದಂತೆ ಮೈಸೂರು ಭಾಗದ ಜನಪ್ರತಿನಿಧಿಗಳು, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here