
ಗುರುಪುರ ನದಿ ಬಳಿ ವಿಮಾನ ಪತನದ ಸನ್ನಿವೇಶ ಸೃಷ್ಟಿ; NDRF, SDRF ಸೇರಿದಂತೆ ವಿವಿಧ ಸಂಸ್ಥೆಗಳ ಪಾಲ್ಗೊಳ್ಳುವಿಕೆ
ಮಂಗಳೂರು: ವಿಮಾನ ಅಪಘಾತದಂತಹ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುವ ಸಿದ್ಧತೆಯನ್ನು ಪರಿಶೀಲಿಸುವ ಉದ್ದೇಶದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ವಿವಿಧ ತುರ್ತು ಪ್ರತಿಕ್ರಿಯಾ ಸಂಸ್ಥೆಗಳ ಸಹಯೋಗದೊಂದಿಗೆ ನವೆಂಬರ್ 27ರಂದು ಸಮಗ್ರ ಅಣಕು ವ್ಯಾಯಾಮ ನಡೆಸಲಾಯಿತು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಆಶ್ರಯದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಸಂಭವಿಸುವ ವಿಮಾನ ಅಪಘಾತದ ಕೃತಕ ಸನ್ನಿವೇಶವನ್ನು ಸೃಷ್ಟಿಸಿ ರಕ್ಷಣಾ ಕಾರ್ಯಾಚರಣೆ ಹಾಗೂ ವಿವಿಧ ಇಲಾಖೆಗಳ ನಡುವಿನ ಸಮನ್ವಯವನ್ನು ಪರೀಕ್ಷಿಸಲಾಯಿತು.

ಅಣಕು ಸನ್ನಿವೇಶದ ಪ್ರಕಾರ, ಪ್ರಯಾಣಿಕ ವಿಮಾನವೊಂದು ಟೇಕ್ ಆಫ್ ಆದ ಸ್ವಲ್ಪ ಸಮಯದ ಬಳಿಕ ಎಂಜಿನ್ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಗುರುಪುರ ನದಿಯ ಸಮೀಪ ವಿಮಾನ ನಿಲ್ದಾಣದ ಗಡಿಯ ಹೊರಭಾಗದಲ್ಲಿ ಪತನಗೊಂಡಿರುವಂತೆ ಚಿತ್ರಿಸಲಾಗಿತ್ತು. ವಿಮಾನದಲ್ಲಿ ಬೆಂಕಿ ಕಾಣಿಸಿಕೊಳ್ಳುವುದು, ನದಿಯಲ್ಲಿ ಪ್ರಯಾಣಿಕರು ಸಿಲುಕಿಕೊಳ್ಳುವುದು, ಗಾಯಾಳುಗಳ ರಕ್ಷಣೆ, ಅವಶೇಷಗಳ ನಡುವೆ ಸಿಲುಕಿದವರ ಸ್ಥಳಾಂತರ ಹಾಗೂ ಸಾಮೂಹಿಕ ಸಾವುನೋವು ನಿರ್ವಹಣೆಯ ಸವಾಲುಗಳನ್ನು ಈ ಮೂಲಕ ಪರೀಕ್ಷಿಸಲಾಯಿತು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆ, ಜಲ ರಕ್ಷಣೆ, ಗಾಯಾಳುಗಳ ವರ್ಗೀಕರಣ ಮತ್ತು ಸ್ಥಳಾಂತರ, ಸಂಚಾರ ನಿಯಂತ್ರಣ, ಜನಸಂದಣಿ ನಿರ್ವಹಣೆ, ಕುಟುಂಬ ಸದಸ್ಯರಿಗೆ ನೆರವು ಹಾಗೂ ಮಾಧ್ಯಮ ನಿರ್ವಹಣೆ ಸೇರಿದಂತೆ ವಿವಿಧ ವಿಭಾಗಗಳು ಕಾರ್ಯನಿರ್ವಹಿಸಿದವು. ಘಟನಾ ಕಮಾಂಡ್ ಪೋಸ್ಟ್ ಮತ್ತು ಮೊಬೈಲ್ ಕಮಾಂಡ್ ವ್ಯವಸ್ಥೆಯ ಮೂಲಕ ಕಾರ್ಯಾಚರಣೆಗಳ ಸಮನ್ವಯವನ್ನು ಪರಿಶೀಲಿಸಲಾಯಿತು.
ಈ ಸಮಗ್ರ ಅಣಕು ವ್ಯಾಯಾಮದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಾಯು ಸಂಚಾರ ನಿಯಂತ್ರಣ ವಿಭಾಗ, ದಕ್ಷಿಣ ಕನ್ನಡ ಜಿಲ್ಲಾಡಳಿತದ 40ಕ್ಕೂ ಹೆಚ್ಚು ಇಲಾಖೆಗಳು, ಪೊಲೀಸ್ ಮತ್ತು ಸಂಚಾರ ಪೊಲೀಸರು, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF), ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸೇರಿದಂತೆ ವಿವಿಧ ಸಂಘಟನೆಗಳ 500ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು. ಆರು ಪ್ರಮುಖ ಕೈಗಾರಿಕೆಗಳು, ಆಸ್ಪತ್ರೆಗಳು ಹಾಗೂ ವೈದ್ಯಕೀಯ ತಂಡಗಳೂ ಕಾರ್ಯಾಚರಣೆಯಲ್ಲಿ ಕೈಜೋಡಿಸಿದವು.
ಅಣಕು ಕಾರ್ಯಾಚರಣೆಗೆ ಪೂರ್ವಭಾವಿಯಾಗಿ ನವೆಂಬರ್ 26ರಂದು ವಿಮಾನ ನಿಲ್ದಾಣದಲ್ಲಿ ಟೇಬಲ್ಟಾಪ್ ವ್ಯಾಯಾಮ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಜವಾಬ್ದಾರಿ, ಕಾರ್ಯವಿಧಾನ ಹಾಗೂ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಸಮನ್ವಯದ ಅಗತ್ಯವಿರುವ ಅಂಶಗಳನ್ನು ಗುರುತಿಸಿದ್ದರು.
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ (DGCA) ನಿಯಮಾವಳಿಗಳ ಅನ್ವಯ ಇಂತಹ ಅಣಕು ವ್ಯಾಯಾಮ ಕಡ್ಡಾಯವಾಗಿದ್ದು, ತುರ್ತು ಸಂದರ್ಭಗಳಲ್ಲಿ ವಿವಿಧ ಸಂಸ್ಥೆಗಳ ತ್ವರಿತ ಸ್ಪಂದನೆ, ಸಂವಹನ ಮತ್ತು ಪರಸ್ಪರ ಸಮನ್ವಯವನ್ನು ಮೌಲ್ಯಮಾಪನ ಮಾಡಲು ಇದು ಸಹಕಾರಿಯಾಗಿದೆ.
ಈ ಅಣಕು ಕಾರ್ಯಾಚರಣೆಯ ಮೂಲಕ ವಿಮಾನ ಅಪಘಾತದಂತಹ ಗಂಭೀರ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ವಿಮಾನ ನಿಲ್ದಾಣ ಹಾಗೂ ಜಿಲ್ಲಾಡಳಿತದ ಸಿದ್ಧತೆಯನ್ನು ಪರಿಶೀಲಿಸುವುದರೊಂದಿಗೆ, ನೈಜ ಘಟನೆಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶ ಹೊಂದಲಾಗಿದೆ. ಕಾರ್ಯಾಚರಣೆಯಲ್ಲಿ ತೋರಿಸಲಾದ ಎಲ್ಲಾ ಅಪಘಾತಗಳು, ಗಾಯಾಳುಗಳು ಮತ್ತು ಸಾವು-ನೋವುಗಳು ಕೇವಲ ಅಣಕು ಸನ್ನಿವೇಶದ ಭಾಗವಾಗಿದ್ದವು.

