“ಮೊಳಹಳ್ಳಿ ಆಶಾ ಕುಲಾಲ್ ರವರಿಗೆ ಬೇಕಿದೆ ಸಹಾಯ ಹಸ್ತದ ನೆರವು

0
22

ಕುಂದಾಪುರ : ವಿಧಿಯಾಟವೇ ವಿಚಿತ್ರ. ತಂದೆಯ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಆರೈಕೆ ಮಾಡುತ್ತಿದ್ದ ಮಗಳ ಬದುಕಿನಲ್ಲೇ ಮತ್ತೊಂದು ಆಘಾತ ಎದುರಾಗಿದೆ. ತಂದೆಗೆ ಊಟ ತರಲು ತೆರಳುತ್ತಿದ್ದ ವೇಳೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಕಾಲು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಆಶಾ ಕುಲಾಲ್ ಅವರು ತಮ್ಮ ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಅಂಕದಕಟ್ಟೆಯ ಸರ್ಜನ್ ಆಸ್ಪತ್ರೆಗೆ ದಾಖಲಿಸಿದ್ದರು. ತಂದೆಯ ಆರೈಕೆಯಲ್ಲಿ ತೊಡಗಿದ್ದ ಆಶಾ ಅವರು ಒಂದು ದಿನ ತಂದೆಗೆ ಊಟ ತರಲು ಸರ್ವಿಸ್ ರಸ್ತೆಯನ್ನು ದಾಟಿ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿ ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಆಶಾ ಅವರ ಕಾಲಿನ ಮೇಲೆ ಟಿಪ್ಪರ್‌ನ ಚಕ್ರ ಹರಿದ ಪರಿಣಾಮ ಕಾಲು ಸಂಪೂರ್ಣವಾಗಿ ನುಚ್ಚುಗುಜ್ಜಾಗಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಈಗಾಗಲೇ ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಆಶಾ ಅವರ ಕುಟುಂಬಕ್ಕೆ ಈ ಅಪಘಾತ ಮತ್ತೊಂದು ದೊಡ್ಡ ಆಘಾತವಾಗಿ ಪರಿಣಮಿಸಿದೆ. ತಂದೆಯ ಅನಾರೋಗ್ಯದ ಸಂಕಷ್ಟದ ನಡುವೆ ಇದೀಗ ಆಶಾ ಅವರ ಚಿಕಿತ್ಸೆಯ ವೆಚ್ಚ ಹಾಗೂ ಮುಂದಿನ ಜೀವನದ ಚಿಂತೆ ಕುಟುಂಬವನ್ನು ಕಾಡುತ್ತಿದೆ.

ಈ ಸಂಕಷ್ಟದ ಸಮಯದಲ್ಲಿ ಆಶಾ ಕುಲಾಲ್ ಅವರ ಕುಟುಂಬಕ್ಕೆ ಸಮಾಜದ ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಾಯವನ್ನು ನೀಡುವ ಅಗತ್ಯವಿದೆ. ನೋವಿನಲ್ಲಿ ನೆರವಿಗಾಗಿ ಕಾಯುತ್ತಿರುವ ಈ ಕುಟುಂಬಕ್ಕೆ ಮಾನವೀಯತೆಯ ನೆಲೆಯಲ್ಲಿ ಸಹಾಯಹಸ್ತ ಚಾಚುವ ಮೂಲಕ ಅವರ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸಬೇಕಿದೆ.

ಆಶಾ ಅವರು ಶೀಘ್ರ ಗುಣಮುಖರಾಗಿ ಮತ್ತೆ ಸಹಜ ಜೀವನಕ್ಕೆ ಮರಳಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.