ಮಂಗಳೂರು : ಕನ್ನಡ ಭಾಷೆ, ಸಾಹಿತ್ಯ, ಸಂಶೋಧನೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಹಿರಿಯ ವಿದ್ವಾಂಸರನ್ನು ಗೌರವಿಸುವ ಉದ್ದೇಶದಿಂದ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ ಮೂಲಕ ಸ್ಥಾಪಿಸಲಾಗಿರುವ ರೆವ. ಡಾ. ಫರ್ಡಿನಾಂಡ್ ಕಿಟ್ಟೆಲ್ ಫೌಂಡೇಶನ್ನ ಪ್ರಥಮ ‘ರೆವ. ಡಾ. ಫರ್ಡಿನಾಂಡ್ ಕಿಟ್ಟೆಲ್ ಪ್ರಶಸ್ತಿ’ಗೆ ಹಿರಿಯ ವಿದ್ವಾಂಸರಾದ ಪ್ರೊ. ಎ.ವಿ. ನಾವಡ ಹಾಗೂ ಧಾರವಾಡದ ಪ್ರೊ. ವೀರಣ್ಣ ರಾಜೂರ ಅವರು ಆಯ್ಕೆಯಾಗಿದ್ದಾರೆ.
ಕಿಟ್ಟೆಲ್ ಅವರ ಜೀವನ ಮತ್ತು ಕೃತಿಗಳ ಕುರಿತ ಸಂಶೋಧನೆ, ಭಾಷಾವಿಜ್ಞಾನ, ಕೋಶವಿಜ್ಞಾನ, ಜಾನಪದ ಹಾಗೂ ಹರಿದಾಸ ಸಾಹಿತ್ಯ ಕ್ಷೇತ್ರಗಳಲ್ಲಿ ಪ್ರೊ. ಎ.ವಿ. ನಾವಡ ಅವರು ನೀಡಿರುವ ಮಹತ್ವದ ಕೊಡುಗೆಯನ್ನು ಪರಿಗಣಿಸಲಾಗಿದೆ. ಅದೇ ರೀತಿ ನಡುಗನ್ನಡ ಸಾಹಿತ್ಯ, ವಚನ ಸಾಹಿತ್ಯ, ಹಸ್ತಪ್ರತಿ ಸಂಪಾದನೆ ಮತ್ತು ಸಾಹಿತ್ಯ ಸಂಶೋಧನಾ ಕ್ಷೇತ್ರಗಳಲ್ಲಿ ಪ್ರೊ. ವೀರಣ್ಣ ರಾಜೂರ ಅವರು ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರೊ. ಎ.ವಿ. ನಾವಡ ಅವರ ಸಾಧನೆ:
1946ರ ಏಪ್ರಿಲ್ 28ರಂದು ಮಂಗಳೂರಿನ ಸಮೀಪದ ಕೋಟೆಕಾರಿನಲ್ಲಿ ಜನಿಸಿದ ಪ್ರೊ. ಎ.ವಿ. ನಾವಡ ಅವರು ಭಾಷಾವಿಜ್ಞಾನಿ, ಕೋಶವಿಜ್ಞಾನಿ, ಸಂಶೋಧಕ, ಜಾನಪದ ವಿದ್ವಾಂಸ ಹಾಗೂ ಹರಿದಾಸ ಸಾಹಿತ್ಯದ ಅಧ್ಯಯನಕಾರರಾಗಿ ಗುರುತಿಸಿಕೊಂಡಿದ್ದಾರೆ. ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಸುಮಾರು 24 ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು, ಕನ್ನಡ ವಿಶ್ವವಿದ್ಯಾಲಯದಲ್ಲಿ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಹಾಗೂ ಪುರಂದರದಾಸ ಅಧ್ಯಯನ ಪೀಠದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ತುಳು ನಿಘಂಟು ಯೋಜನೆಯ ಮುಖ್ಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
‘ವಿವಕ್ಷೆ’, ‘ಜಾನಪದ ಸಮಾಲೋಚನೆ’, ‘ಜಾನಪದ ಕೈಪಿಡಿ’, ‘ತುಳು ಜಾನಪದ ಗೀತೆಗಳು’, ‘ಸಾವಿರಾರು ಕೀರ್ತನೆಗಳು’ ಸೇರಿದಂತೆ ಅನೇಕ ಮಹತ್ವದ ಕೃತಿಗಳನ್ನು ರಚಿಸಿ, ಸಂಪಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಹಾಗೂ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ.
ಪ್ರೊ. ವೀರಣ್ಣ ರಾಜೂರ ಅವರ ಸಾಧನೆ:
1947ರ ಜೂನ್ 4ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೆನಕನಾಳದಲ್ಲಿ ಜನಿಸಿದ ಪ್ರೊ. ವೀರಣ್ಣ ರಾಜೂರ ಅವರು ಕನ್ನಡ ಸಾಹಿತ್ಯ ಸಂಶೋಧನೆ, ವಚನ ಸಾಹಿತ್ಯ ಅಧ್ಯಯನ, ಹಸ್ತಪ್ರತಿ ಸಂಪಾದನೆ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಹಾಯಕ ಸಂಶೋಧಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಅಧ್ಯಕ್ಷರಾಗಿ ಹಾಗೂ ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಡಾ. ಎಂ.ಎಂ. ಕಲಬುರ್ಗಿ ಅವರ ಆಪ್ತ ಶಿಷ್ಯರಾಗಿದ್ದ ಅವರು, ಬಸವೋತ್ತರ ಯುಗದ ವಚನಕಾರರ ಕುರಿತು ಮಹತ್ವದ ಸಂಶೋಧನೆ ನಡೆಸಿದ್ದಾರೆ. ‘ವಚನ ಅಧ್ಯಯನ’, ‘ಸ್ವರವಚನಗಳು’, ‘ವೀರಣ್ಣ ರಾಜೂರ ನೂರೊಂದು ಬರಹ’, ‘ನೂರು ಶೋಧ’ ಸೇರಿದಂತೆ ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಫೆಲೊಶಿಪ್ ಹಾಗೂ ಫ.ಗು. ಹಳಕಟ್ಟಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.
ಪ್ರೊ. ಕೆ. ಚಿನ್ನಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ರೆ. ಡಾ. ಎಚ್.ಎಂ. ವಾಟ್ಸನ್, ಡಾ. ಧನಂಜಯ ಕುಂಬ್ಳೆ, ಡಾ. ಪ್ರಕಾಶಚಂದ್ರ ಶಿಶಿಲ ಹಾಗೂ ರೆ. ಡಾ. ಸಂದೀಪ್ ಥಿಯೋಫಿಲ್ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ಪ್ರಶಸ್ತಿ ಪುರಸ್ಕೃತರನ್ನು ನಿರ್ಧರಿಸಿದೆ.
ಕನ್ನಡದ ಮಹಾನ್ ವಿದ್ವಾಂಸ ಫರ್ಡಿನಾಂಡ್ ಕಿಟ್ಟೆಲ್:
1832ರಿಂದ 1903ರವರೆಗೆ ಬದುಕಿದ್ದ ರೆವರೆಂಡ್ ಡಾ. ಫರ್ಡಿನಾಂಡ್ ಕಿಟ್ಟೆಲ್ ಅವರು ಬಾಸೆಲ್ ಮಿಷನ್ನ ಮಿಷನರಿಯಾಗಿದ್ದು, ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ–ಇಂಗ್ಲಿಷ್ ನಿಘಂಟು, ವ್ಯಾಕರಣ, ಛಂದಸ್ಸು ಹಾಗೂ ಸಾಹಿತ್ಯ ಸಂಶೋಧನಾ ಕ್ಷೇತ್ರಗಳಲ್ಲಿ ಅವರ ಕಾರ್ಯ ಮಹತ್ವದ್ದಾಗಿದೆ. 1894ರಲ್ಲಿ ಪ್ರಕಟವಾದ ಅವರ ಕನ್ನಡ–ಇಂಗ್ಲಿಷ್ ನಿಘಂಟು ಕನ್ನಡ ಭಾಷೆಯ ಅಧ್ಯಯನಕ್ಕೆ ಮಹತ್ವದ ಆಕರವಾಗಿದೆ. ಅವರ ವಿದ್ವತ್ತನ್ನು ಗುರುತಿಸಿ ಜರ್ಮನಿಯ ಟ್ಯೂಬಿಂಗನ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.
ಕಿಟ್ಟೆಲ್ ಅವರ ವಿದ್ವತ್ತು, ಶಿಕ್ಷಣ ಹಾಗೂ ಅಂತರ್ಸಾಂಸ್ಕೃತಿಕ ತಿಳಿವಳಿಕೆಯಿಂದ ಪ್ರೇರಿತವಾಗಿರುವ ಫೌಂಡೇಶನ್ ಕನ್ನಡ ಭಾಷೆ ಮತ್ತು ಸಾಹಿತ್ಯದ ಸಂಶೋಧನೆಗೆ ಉತ್ತೇಜನ ನೀಡುವುದು, ವಿಚಾರ ಸಂಕಿರಣ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಮತ್ತು ಸಂಶೋಧನಾತ್ಮಕ ಕೃತಿಗಳನ್ನು ಪ್ರಕಟಿಸುವ ಉದ್ದೇಶ ಹೊಂದಿದೆ.
ಪ್ರಥಮ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 12ರಂದು ಮಂಗಳೂರಿನ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ ಬಿಶಪ್ ಜತ್ತನ್ನ ಸಭಾಂಗಣದಲ್ಲಿ ನಡೆಯಲಿದೆ ಎಂದು ಫೌಂಡೇಶನ್ ಪ್ರಕಟಣೆ ತಿಳಿಸಿದೆ.

