ಮೂಡುಬಿದಿರೆ : ದೆಹಲಿಯ ಕುಂದಕುಂದ ಭಾರತಿ ಜೈನ ಕೇಂದ್ರದಲ್ಲಿ ಸ್ವರ್ಗೀಯ ಶ್ವೇತಪಿಂಚಾಚಾರ್ಯ 108 ಆಚಾರ್ಯ ವಿದ್ಯಾನಂದ ಮುನಿ ಮಹಾರಾಜರ 101ನೇ ಜನ್ಮ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾಸ್ವಾಮೀಜಿ ಏಪ್ರಿಲ್ 26, 2026ರಂದು ಭಾಗವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಹಾಸ್ವಾಮೀಜಿಯವರು ಮಾತನಾಡಿ, ಆಚಾರ್ಯ ವಿದ್ಯಾನಂದರು ಉತ್ತರ ಹಾಗೂ ದಕ್ಷಿಣ ಭಾರತದ ಅನೇಕ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರಕ್ಕೆ ಪ್ರೇರಣೆ ನೀಡಿದ ಮಹಾನ್ ಸಾಧಕರಾಗಿದ್ದು, ಹಲವು ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಿ “ರಾಷ್ಟ್ರ ಸಂತ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು. ಅವರ ಪ್ರವಚನಗಳು ಜನಮನ ಸೆಳೆದಿದ್ದು, ಇಂದಿಗೂ ಬಹು ಜನಪ್ರಿಯವಾಗಿವೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಆಚಾರ್ಯ ಶ್ರುತಸಾಗರ ಮುನಿ ಮಹಾರಾಜರ ಸಾನ್ನಿಧ್ಯದಲ್ಲಿ ಪ್ರಾಕೃತ ವಿದ್ವಾಂಸರಾದ ಪ್ರೊ. ಅನೇಕಾಂತ ಜೈನ್ (ಲಾಲ್ ಬಹಾದ್ದೂರ್ ಶಾಸ್ತ್ರಿ ಸಂಸ್ಕೃತ ಕಾಲೇಜು, ಪ್ರಾಕೃತ ವಿಭಾಗ) ಅವರಿಗೆ “ಆಚಾರ್ಯ ವಿದ್ಯಾನಂದ ಪುರಸ್ಕಾರ” ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಹಸ್ತಿನಾಪುರದ ರವೀಂದ್ರ ಕೀರ್ತಿ ಸ್ವಾಮೀಜಿ, ತಿಜಾರ ಸೌರಭ್ ಸೇನ ಸ್ವಾಮೀಜಿ, ಟ್ರಸ್ಟಿ ಅಧ್ಯಕ್ಷ ಸತೀಶ್ ಜೈನ್, ಮಹಾಮಂತ್ರಿ ಅನಿಲ್ ಜೈನ್, ಅರ್ಜುನ್ ಜೈನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಡಾ. ವೀರ ಸಾಗರ ಜೈನ್ ಮಂಗಳಾಚರಣೆಯನ್ನು ನೆರವೇರಿಸಿದರು.

ಮುಂದುವರಿದ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ, ಮೂಡುಬಿದಿರೆಯ ಶ್ರೀಗಳು ಏಪ್ರಿಲ್ 27 ಮತ್ತು 28, 2026ರಂದು ಝಾರ್ಖಂಡ್ ರಾಜ್ಯದ ಜೈನ ಸಿದ್ಧ ಕ್ಷೇತ್ರ ಸಮ್ಮೇದ ಶಿಖರ್ಜಿಯಲ್ಲಿ ಸಿದ್ಧಕೂಟಗಳ ವಂದನೆ ಸಲ್ಲಿಸಿ, ಆಚಾರ್ಯ ವಸು ನಂದಿ ಮಹಾರಾಜರ ಪಂಚಕಲ್ಯಾಣ ಹಾಗೂ ಆಚಾರ್ಯ ಪ್ರಮಾಣ ಸಾಗರ ಮಹಾರಾಜರ ಶಂಕ ಸಮಾಧಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಬಳಿಕ ಅವರು ಕ್ಷೇತ್ರಕ್ಕೆ ಮರಳಿದರು.

