ಮೂಡುಬಿದಿರೆ : ಆರ್‌ಎಸ್‌ಎಸ್ ಶತಮಾನೋತ್ಸವ ಅಂಗವಾಗಿ “ಹಿಂದುಸಂಗಮ” ಕಾರ್ಯಕ್ರಮ – ಆಮಂತ್ರಣ ಪತ್ರಿಕೆ ಲೋಕಾರ್ಪಣೆ

0
67

ಮೂಡುಬಿದಿರೆ:ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆರಂಭವಾಗಿ ನೂರು ವರ್ಷಗಳು ಪೂರ್ತಿಯಾಗಿರುವ ಹಿನ್ನೆಲೆಯಲ್ಲಿ, ವಿಶ್ವದಾದ್ಯಂತ ಎಲ್ಲಾ ಕಡೆಗಳಲ್ಲಿ “ಹಿಂದುಸಂಗಮ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಮೂಡುಬಿದಿರೆ ತಾಲೂಕಿನ ಎಂಟು ಮಂಡಲಗಳಲ್ಲಿಯೂ ಹಿಂದುಸಂಗಮ ಕಾರ್ಯಕ್ರಮಗಳು ಜರುಗಲಿವೆ.

ಮೂಡುಬಿದಿರೆ ನಗರದ 18 ಉಪವಸತಿಗಳ ವ್ಯಾಪ್ತಿಯ ಹಿಂದುಸಂಗಮ ಕಾರ್ಯಕ್ರಮವು 25-01-2026 ಭಾನುವಾರ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಜರುಗಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ಕೋಟೆಬಾಗಿಲು ಶ್ರೀ ವೀರ ಮಾರುತಿ ದೇವಸ್ಥಾನದಲ್ಲಿ ನಡೆಯಿತು.

ಮೂಡುಬಿದಿರೆ ಜೈನಮಠದ ಶ್ರೀ ಶ್ರೀ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಆಮಂತ್ರಣ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, “ಪ್ರತಿ ಮನೆಗಳಲ್ಲಿ ಪವಿತ್ರವಾದ ಭಗವಾಧ್ವಜವನ್ನು ಅರಳಿಸಿ, ಪ್ರತಿ ಮನೆಯಿಂದ ಕನಿಷ್ಠ ಇಬ್ಬರಾದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಹಿಂದು ಧರ್ಮದ ಔನ್ನತ್ಯವನ್ನು ಸಾರುವ ಮೂಲಕ ‘ನಾವೆಲ್ಲಾ ಹಿಂದು, ನಾವೆಲ್ಲಾ ಒಂದು’ ಎಂಬ ರಾ.ಸ್ವ.ಸಂಘದ ಮಾನ್ಯರಾದ ಡಾ. ಹೆಡಗೆವಾರ್ ಹಾಗೂ ಗುರೂಜಿಯವರ ಚಿಂತನೆಯನ್ನು ಕಾರ್ಯರೂಪಕ್ಕೆ ತರಬೇಕು” ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾ.ಸ್ವ.ಸಂಘದ ಸೋಂದಾ ಭಾಸ್ಕರ್ ಭಟ್, “44ಕ್ಕೂ ಹೆಚ್ಚು ವಿದೇಶಗಳಲ್ಲಿ ವ್ಯಾಪಿಸಿರುವ ಸಂಘವು ಇಂದು ಶತಮಾನೋತ್ಸವ ಆಚರಿಸುತ್ತಿದ್ದು, ಎಲ್ಲಾ ಹಿಂದೂಗಳಲ್ಲಿ ಸಮಾನತೆಯ ತತ್ವವನ್ನು ಬೋಧಿಸುವಲ್ಲಿ ಸಂಘವು ಯಶಸ್ವಿಯಾಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೂಡುಬಿದಿರೆ ಪ್ರಖಂಡದ ವಿಶ್ವ ಹಿಂದು ಪರಿಷತ್ ಕಾರ್ಯಾಧ್ಯಕ್ಷ ಶಾಮ ಹೆಗ್ಡೆ, ಉಪಾಧ್ಯಕ್ಷ ಎಂ. ಶಾಂತರಾಮ ಕುಡ್ವ, ಹಿಂದುಸಂಗಮ ಮೂಡುಬಿದಿರೆ ನಗರ ಸಂಚಾಲಕ ನಾಗರಾಜ ಹೆಗ್ಡೆ, ರಾ.ಸ್ವ.ಸಂಘದ ಪ್ರಮುಖ ಮಂಜುನಾಥ ಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಿಕಾ ಸಮಿತಿಯ ಮೂಕಾಂಬಿಕಾ ಭಟ್ ಸೇರಿದಂತೆ ಸಂಘದ ಹಿರಿಯರು ಹಾಗೂ ಎಲ್ಲಾ ಹಿಂದೂ ಮುಖಂಡರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರಾ.ಸ್ವ.ಸಂಘದ ಪ್ರಮುಖರಾದ ರೋಹನ್ ಬಂಗೇರಾ ವಹಿಸಿದ್ದರು.

LEAVE A REPLY

Please enter your comment!
Please enter your name here