ಮೂಡುಬಿದಿರೆ: ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿರುವ ಘಟನೆ ನಡೆದಿದೆ.
ಹಂಡೇಲಿನ ಮಹಮ್ಮದ್ ಆರೀಪ್ ಹಾಗೂ ಗಂಟಾಲಕಟ್ಟೆಯ ಇಮ್ರಾನ್ ಅಲಿಯಾಸ್ ಇಬ್ರಾಹಿಂ ಬಂಧಿತ ಆರೋಪಿಗಳಾಗಿದ್ದಾರೆ.
ಪಿಎಸ್‌ಐ ಕೃಷ್ಣಪ್ಪ ಮತ್ತು ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಬೆಳುವಾಯಿ ಕಡೆಯಿಂದ ಮಾರ್ನಾಡು ಅಳಿಯೂರು ಕಡೆಗೆ ಬ್ರೀಜಾ ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು.
ಈ ವೇಳೆ ಕೆಎ 19 ಎಂಕೆ 4265 ಸಂಖ್ಯೆಯ ಕಾರು ಬಂದಿದ್ದು, ಪೊಲೀಸರು ವಾಹನ ನಿಲ್ಲಿಸಲು ಸೂಚಿಸಿದರೂ ಆರೋಪಿಗಳು ಸೂಚನೆ ಪಾಲಿಸದೆ ವೇಗವಾಗಿ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರನ್ನು ಬೆನ್ನಟ್ಟಿದ್ದಾರೆ.
ಪರಾರಿಯಾಗುತ್ತಿದ್ದ ಆರೋಪಿಗಳು ಗುಂಡುಕಲ್ಲು 5 ಸೈಂಟ್ಸ್ ರಸ್ತೆಯ ಸಾಹುಲ್ ಹಮೀದ್ ಎಂಬುವರ ಮನೆ ಕಂಪೌಂಡ್ ಒಳಗೆ ಕಾರು ನುಗ್ಗಿಸಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಪೊಲೀಸರು ಬೆನ್ನಟ್ಟಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಕಾರು ತಪಾಸಣೆ ನಡೆಸಿದಾಗ ಹಿಂಬದಿ ಸೀಟುಗಳನ್ನು ತೆಗೆದು ಅದರ ಮೇಲೆ ನೀಲಿ ಪ್ಲಾಸ್ಟಿಕ್ ಹಾಸಿ, ಗಂಡು ಕರುವೊಂದನ್ನು ಹಗ್ಗದಿಂದ ಕಟ್ಟಿ ಅಮಾನವೀಯವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗಳು ಕಳೆದ ಒಂದು ವಾರದಿಂದ ವಿವಿಧೆಡೆಗಳಿಂದ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದುದಾಗಿ ಹಾಗೂ ಗುಂಡುಕಲ್ಲು ನಿವಾಸಿ ಸಾಹುಲ್ ಹಮೀದ್ ಅವರ ಮನೆಯ ಬಳಿ ಅವುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡಲು ಅಥವಾ ಇತರರಿಗೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಡಲಾಗುತ್ತಿತ್ತು ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಕರು ಹಾಗೂ ಸಾಗಾಟಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಮಹಮ್ಮದ್ ಆರೀಪ್ ವಿರುದ್ಧ ಈಗಾಗಲೇ ಬಜಪೆ, ಬಣಕಲ್ ಹಾಗೂ ಮೂಡುಬಿದಿರೆ ಠಾಣೆಗಳಲ್ಲಿ ಜಾನುವಾರು ಹತ್ಯೆ ತಡೆ ಕಾಯ್ದೆ ಸೇರಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಇಮ್ರಾನ್ ವಿರುದ್ಧ ಮೂಡುಬಿದಿರೆ ಹಾಗೂ ಕಾರ್ಕಳ ನಗರ ಠಾಣೆಗಳಲ್ಲಿ ಎನ್‌ಡಿಪಿಎಸ್, ಕೆಪಿ ಆಕ್ಟ್ ಹಾಗೂ ಜಾನುವಾರು ಕಳ್ಳತನಕ್ಕೆ ಸಂಬಂಧಿಸಿದಂತೆ ಐದಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇರುವುದಾಗಿ ತಿಳಿದುಬಂದಿದೆ.

