ಮೂಡುಬಿದಿರೆ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ “ಮಾಧ್ಯಮ ಹಬ್ಬ” ಕಾರ್ಯಕ್ರಮ

0
44

ನೈಜ ವಿಚಾರಗಳು ಬಂದಾಗ ಆರೋಗ್ಯಪೂರ್ಣ ಸಮಾಜ ಕಟ್ಟಲು ಸಾಧ್ಯ: ಶಾಸಕ ಉಮಾನಾಥ ಕೋಟ್ಯಾನ್

ಮೂಡುಬಿದಿರೆ: ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ಮಾಧ್ಯಮ ಹಬ್ಬ-2025 ಕಾರ್ಯಕ್ರಮವು ಸಂಘದ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಸಮಾಜ ಮಂದಿರದಲ್ಲಿ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪತ್ರಕರ್ತರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿಳಿದುಕೊಂಡು ತಿದ್ದುವವರು. ಅದರಲ್ಲಿ ನೈಜ ವಿಚಾರಗಳು ಬಂದಾಗ ಆರೋಗ್ಯಪೂರ್ಣ ಸಮಾಜ ಕಟ್ಟಲು ಸಾಧ್ಯ. ಪತ್ರಕರ್ತ ಆದವರು ಬರೆದ ವಿಚಾರಗಳನ್ನು ಜನ ನಂಬುವಂತಿರಬೇಕು, ಜನ ಒಪ್ಪಬೇಕು ಮತ್ತು ಜೀರ್ಣಿಸಿಕೊಳ್ಳಬೇಕಾಗಿರುವುದು ಧರ್ಮ. ಅದರಲ್ಲಿ ಮೂಡಬಿದ್ರೆ ಪತ್ರಕರ್ತರು ನಿಷ್ಪಕ್ಷಪಾತ ವರದಿ ಮಾಡುತ್ತಾ ಬಂದಿರುವುದನ್ನು ನಾನು ಗಮನಿಸುತ್ತಾ ಬಂದಿದ್ದೇನೆ ಎಂದು ಹೇಳಿದರು.

ಸಂಘದ ನೂತನ ಕಟ್ಟಡಕ್ಕೆ ರೂ. 25 ಲಕ್ಷ ಅನುದಾನ

ಪತ್ರಕರ್ತರ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಇಲ್ಲಿಯ ಪತ್ರಕರ್ತರು ನಿರಂತರ ಶ್ರಮ ಪಟ್ಟಿದ್ದಾರೆ. ನಾನೀಗ 5 ಸೆಂಟ್ ಜಾಗವನ್ನು ಕಾಯ್ದಿರಿಸುವಲ್ಲಿ ಶ್ರಮಿಸಿದ್ದೇನೆ ಅನ್ನುವ ಹೆಮ್ಮೆ ಮತ್ತು ತೃಪ್ತಿ ಇದೆ. ಶಾಸಕರ ಅನುದಾನ ಒಟ್ಟು 2 ಕಂತಿನಲ್ಲಿ ರೂ. 25 ಲಕ್ಷ ನೀಡುತ್ತೇನೆ, ಸಂಘದ ಕಟ್ಟಡ ನಿರ್ಮಾಣ ಶೀಘ್ರ ನೆರವೇರುವಂತಾಗಲಿ ಎಂದು ಶಾಸಕ ಕೋಟ್ಯಾನ್‌ ಆಶಯ ವ್ಯಕ್ತಪಡಿಸಿದರು.

ಉಪನ್ಯಾಸ

ವಿಶ್ರಾಂತ ಪತ್ರಕರ್ತ ಸದಾನಂದ ಹೆಗಡೆಕಟ್ಟೆ ಪ್ರಾಯೋಜಿತ ದತ್ತಿನಿಧಿ ಉಪನ್ಯಾಸದಲ್ಲಿ ದೈಜಿ ವರ್ಲ್ಡ್ ಮಾಧ್ಯಮ ಸ್ಥಾಪಕರಾದ ವಾಲ್ಟರ್ ನಂದಳಿಕೆ ಅವರು ‘ ಭವಿಷ್ಯದಲ್ಲಿ ಮಾಧ್ಯಮಗಳಿಗಿರುವ ಸವಾಲುಗಳು ‘ ಎನ್ನುವ ವಿಷಯದಲ್ಲಿ ಉಪನ್ಯಾಸ ನೀಡಿದರು.

ಪ್ರೆಸ್ ಕ್ಲಬ್ ಗೌರವ-ಸನ್ಮಾನ

ಇದೇ ಸಂದರ್ಭದಲ್ಲಿ ನ್ಯೂಸ್ ಫಸ್ಟ್ ಕನ್ನಡದ ಸುದ್ದಿ ವಾಚಕ ವಾಸುದೇವ ಭಟ್ ಮಾರ್ನಾಡು ಅವರಿಗೆ ಪ್ರೆಸ್ ಕ್ಲಬ್ ಗೌರವ ನೀಡಿ ಸನ್ಮಾನಿಸಲಾಯಿತು. ಎಸ್ಸೆಸೆಲ್ಸಿ ಸಾಧಕರಾದ ರುಚಿರಾ ಕುಂದರ್, ಸುಶಾಂತ್ ದರೆಗುಡ್ಡೆ, ಸಿಂಚನಾ ಮೂಡುಮಾರ್ನಾಡು ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹಾಗೂ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.
ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಸೃಜನಾ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಂಘದ ಖಜಾಂಚಿ ಪ್ರಸನ್ನ ಹೆಗ್ಡೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೈಸನ್ ತಾಕೊಡೆ ಸನ್ಮಾನ ಪತ್ರ ವಾಚಿಸಿದರು. ನವೀನ್ ಸಾಲಿಯಾನ್ ವಂದಿಸಿದರು. ಅಶ್ರಫ್ ವಾಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಸದಸ್ಯರಾದ ಯಶೋಧರ ಬಂಗೇರ, ರಾಘವೇಂದ್ರ ಶೆಟ್ಟಿ,ಪುನೀತ್, ಶರತ್ ದೇವಾಡಿಗ, ಪ್ರೆಸ್ ಕ್ಲಬ್ ನಿರ್ವಾಹಕಿ ದೀಪ್ತಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here